February 8, 2026
Sunday, February 8, 2026
spot_img

ಬೆಳಗಾವಿಯಲ್ಲಿ ಮೊಳಗಿದ ಯಕ್ಷಗೆಜ್ಜೆ: ಮಹಿಳಾ ಕಲಾವಿದೆಯರ ನರಕಾಸುರ ವಧೆಗೆ ಪ್ರೇಕ್ಷಕರು ಫಿದಾ!

ಹೊಸದಿಗಂತ ಬೆಳಗಾವಿ:

ಇಲ್ಲಿನ ಕನ್ನಡ ಭವನದಲ್ಲಿ ಇತ್ತೀಚೆಗೆ ಶಿರಸಿಯ ‘ಯಕ್ಷಗೆಜ್ಜೆ’ ಮಹಿಳಾ ತಂಡವು ಪ್ರದರ್ಶಿಸಿದ ‘ನರಕಾಸುರ ವಧೆ’ ಅರ್ಥಾತ್ ‘ಪಾರಿಜಾತ’ ಯಕ್ಷಗಾನ ಪ್ರಸಂಗವು ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ಯದ್ಭುತ ಅಭಿನಯ ಮತ್ತು ಶಾಸ್ತ್ರೀಯ ಶೈಲಿಯ ನೃತ್ಯದ ಮೂಲಕ ಮಹಿಳಾ ಕಲಾವಿದರು ಯಕ್ಷಗಾನದ ಮೇಲಿನ ಆಸಕ್ತಿಯನ್ನು ಇಮ್ಮಡಿಗೊಳಿಸಿದರು.

ಹೊಸ್ತೋಟ ಮಂಜುನಾಥ ಭಾಗವತರು ವಿರಚಿಸಿದ ಈ ಪ್ರಸಂಗವು ನರಕಾಸುರನ ಅಟ್ಟಹಾಸ ಮತ್ತು ದೇವಲೋಕದ ಮೇಲಿನ ಅವನ ಆಕ್ರಮಣದಿಂದ ಆರಂಭವಾಯಿತು. ಬ್ರಹ್ಮನ ವರದ ಬಲದಿಂದ ಬೀಗುತ್ತಿದ್ದ ನರಕಾಸುರನನ್ನು ಕೃಷ್ಣ ಮತ್ತು ಸತ್ಯಭಾಮೆಯರು ಸತತ ಹೋರಾಟದ ಮೂಲಕ ಅಂತ್ಯಗೊಳಿಸಿ, ಜಗತ್ತಿಗೆ ಶಾಂತಿ ತರುವ ಕಥಾಹಂದರವನ್ನು ಕಲಾವಿದರು ಮನೋಜ್ಞವಾಗಿ ಕಟ್ಟಿಕೊಟ್ಟರು.

ಕೃಷ್ಣನಾಗಿ ನಿರ್ಮಲಾ ಹೆಗಡೆ, ಸತ್ಯಭಾಮೆಯಾಗಿ ಪ್ರೀತಿ ಹೆಗಡೆ ಮತ್ತು ನರಕಾಸುರನಾಗಿ ಸೌಮ್ಯ ಹೆಗಡೆ ತಮ್ಮ ಅಭಿನಯದ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.

ರೇಣುಕಾ ನಾಗರಾಜ (ದೇವೇಂದ್ರ), ಭಾಗ್ಯಶ್ರೀ ಪವಾರ (ಅಗ್ನಿ) ಮತ್ತು ಪ್ರಕೃತಿ ಪವಾರ (ವರುಣ) ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ಗಜಾನನ ಭಟ್ ತುಳಗೇರಿ, ಶಂಕರ ಭಾಗವತ ಯಲ್ಲಾಪುರ ಹಾಗೂ ಪ್ರಶಾಂತ ಹೆಗಡೆ ಕೈಗಡಿ ಅವರ ಹಿಮ್ಮೇಳದ ಗಾಯನ-ವಾದನ ಪ್ರದರ್ಶನಕ್ಕೆ ಮೆರುಗು ನೀಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಮಾತನಾಡಿ, “ಯಕ್ಷಗಾನವು ಕೇವಲ ಮನರಂಜನೆಯಲ್ಲ, ಅದು ಕರಾವಳಿಯ ಸಾಂಸ್ಕೃತಿಕ ಆತ್ಮ. ಆಧುನಿಕ ‘ನಲಿಕಲಿ’ ಶಿಕ್ಷಣ ಪದ್ಧತಿಗಿಂತ ಮೊದಲೇ ನಮ್ಮ ಯಕ್ಷಗಾನ ಆಡುತ್ತಾ ಕಲಿಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ,” ಎಂದು ಬಣ್ಣಿಸಿದರು.

ಸಮಾಜದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡುತ್ತಿದ್ದ ಕಾಲವೊಂದಿತ್ತು, ಆದರೆ ಇಂದು ಮಹಿಳೆಯರೇ ಯಕ್ಷಗಾನದ ಸಾರಥ್ಯ ವಹಿಸುತ್ತಿರುವುದು ಕಲೆಯ ಬೆಳವಣಿಗೆಯ ದ್ಯೋತಕ ಎಂದು ಅವರು ಆಶಯ ವ್ಯಕ್ತಪಡಿಸಿದರು. ಯುವ ಪೀಳಿಗೆಗೆ ಈ ಕಲೆಯನ್ನು ತಲುಪಿಸಲು ಸಾಮಾಜಿಕ ಮಾಧ್ಯಮಗಳ ಬಳಕೆ ಅಗತ್ಯ ಎಂದೂ ಅವರು ಆಶಿಸಿದರು.

ಕನ್ನಡ ಭವನದ ಉಪಾಧ್ಯಕ್ಷ ಶಿವನಗೌಡ ಪಾಟೀಲ, ವಿಜಯ ಸಾಲಿಯಾನ, ಯ.ರು. ಪಟೀಲ ಮತ್ತು ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ ವೇದಿಕೆಯಲ್ಲಿದ್ದರು. ಹಿರಿಯ ಕಲಾವಿದರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಜಯಲಕ್ಷ್ಮೀ ಶಿಂಧೆ ಸ್ವಾಗತಿಸಿದರೆ, ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !