March 19, 2026
Thursday, March 19, 2026
spot_img

ಅಕ್ರಮ ಬಾಂಗ್ಲಾದೇಶಿಗಳ ಗಡಿಪಾರಿಗೆ ಯತ್ನಾಳ್ ಪಟ್ಟು: ಕೇಂದ್ರ ಗೃಹ ಸಚಿವರಿಗೆ ಪತ್ರ

ಹೊಸದಿಗಂತ ವಿಜಯಪುರ:

ದೇಶದ ಏಕತೆ ಮತ್ತು ಸಮಗ್ರತೆಗೆ ಅಕ್ರಮ ವಲಸಿಗರಿಂದ ಕುತ್ತು ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು ಕೂಡಲೇ ಪತ್ತೆಹಚ್ಚಿ ಗಡಿಪಾರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಾಗಿ ಇಂದು ಕರ್ನಾಟಕವು ಅಕ್ರಮ ಬಾಂಗ್ಲಾ ನಿವಾಸಿಗಳ ತವರೂರಾಗಿ ಪರಿಣಮಿಸಿದೆ. ಇಲ್ಲಿನ ಕಾಫಿ ತೋಟಗಳು, ತ್ಯಾಜ್ಯ ಘಟಕಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಅಕ್ರಮವಾಗಿ ನೆಲೆಸುತ್ತಿರುವ ವಿದೇಶಿಯರು, ಭಾರತೀಯ ನಾಗರಿಕರಿಗೆ ಸೇರಬೇಕಾದ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್‌ಗಳಂತಹ ಅಧಿಕೃತ ದಾಖಲೆಗಳನ್ನು ಅಕ್ರಮವಾಗಿ ಪಡೆದಿರುವುದು ದುರದೃಷ್ಟಕರ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಕ್ರಮ ನಿವಾಸಿಗಳು ಇಲ್ಲಿ ಸಂಪಾದಿಸಿದ ಹಣವನ್ನು ಬಾಂಗ್ಲಾದೇಶಕ್ಕೆ ರವಾನಿಸುವ ಮೂಲಕ ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಭದ್ರತೆಯನ್ನು ಕದಡಲು ಈ ಹಣವನ್ನು ಉಗ್ರಗಾಮಿ ಸಂಘಟನೆಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆಯೂ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳು ಮತ್ತು ಹಿಂದೂ ಕಾರ್ಯಕರ್ತರು ಇಂತಹ ಅಕ್ರಮ ವಾಸಿಗಳನ್ನು ಪತ್ತೆಹಚ್ಚಿದರೂ, ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಅಕ್ರಮ ವಲಸಿಗರ ಪರವಾಗಿ ನಿಂತಿದೆ ಎಂದು ಅವರು ಕಿಡಿಕಾರಿದ್ದಾರೆ.

ಯತ್ನಾಳ್ ಅವರ ಪ್ರಮುಖ ಬೇಡಿಕೆಗಳು:

ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮಾದರಿಯಲ್ಲಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶಿಗಳನ್ನು ಪತ್ತೆಹಚ್ಚಬೇಕು.

ಅಕ್ರಮವಾಗಿ ಪಡೆದಿರುವ ಅವರ ಗುರುತಿನ ಚೀಟಿಗಳನ್ನು ರದ್ದುಪಡಿಸಬೇಕು.

ತಕ್ಷಣವೇ ಅವರ ಮೂಲ ದೇಶಕ್ಕೆ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯತ್ನಾಳ್, ರಾಜ್ಯದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !