ಹೊಸದಿಗಂತ ಯಲ್ಲಾಪುರ:
ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದ ಹಂತಕ, ಈಗ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಯಲ್ಲಾಪುರ ತಾಲೂಕಿನಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇಂದು ಪಟ್ಟಣ ಬಂದ್ ಆಗಿದೆ.
ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ಕೊಲೆಯಾದ ದುರ್ದೈವಿ. ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ (30), ರಂಜಿತಾ ಅವರನ್ನು ಪ್ರೀತಿಸುತ್ತಿರುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ರಂಜಿತಾ ಆತನ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಕೆರಳಿದ ಆರೋಪಿ, ರಂಜಿತಾ ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕ್ರೂರವಾಗಿ ಕೊಲೆ ಮಾಡಿದ್ದನು.
ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ರಫೀಕ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಆದರೆ, ಇಂದು ಯಲ್ಲಾಪುರ ಸಮೀಪದ ಕಾಡಿನಲ್ಲಿ ಆತ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ಬಂಧನದ ಭೀತಿ ಅಥವಾ ಪಶ್ಚಾತ್ತಾಪದಿಂದ ಆತ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಯಲ್ಲಾಪುರ ಸಂಪೂರ್ಣ ಬಂದ್: ಈ ಘೋರ ಹತ್ಯೆಯನ್ನು ಖಂಡಿಸಿ ಹಾಗೂ ಮೃತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ಇಂದು ‘ಯಲ್ಲಾಪುರ ಬಂದ್’ಗೆ ಕರೆ ನೀಡಿವೆ. ಬೆಳಿಗ್ಗೆಯಿಂದಲೇ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದು, ಅಂಗಡಿ-ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಸಾರ್ವಜನಿಕ ವಲಯದಲ್ಲಿ ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

