January20, 2026
Tuesday, January 20, 2026
spot_img

Yellow Line Metro ಉದ್ಘಾಟನೆ: ಸಂಚಾರ ಬದಲಾವಣೆ, ತಾತ್ಕಾಲಿಕವಾಗಿ ಬಂದ್ ಆಗಲಿದೆ ಈ ನಿಲ್ದಾಣಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗರ ಬಹುದಿನಗಳ ಕನಸಾದ ಮೆಟ್ರೋ ಹಳದಿ ಮಾರ್ಗ (Yellow Line Metro) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದೆ. 5,057 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮಾರ್ಗವು ಆರ್‌ವಿ ರಸ್ತೆದಿಂದ ಬೊಮ್ಮಸಂದ್ರವರೆಗೆ ಸಂಪರ್ಕ ಹೊಂದಿದ್ದು, ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ಉದ್ಘಾಟನೆಯ ನಂತರ ಮೋದಿ ರಾಗಿಗುಡ್ಡ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ಪ್ರಯಾಣ ಮಾಡುವ ನಿರೀಕ್ಷೆಯಿದೆ.

ಮೋದಿ ಇಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿಗೆ ಆಗಮಿಸಿ, ಮೊದಲು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ರೈಲು ಸಹ ಒಳಗೊಂಡಿದೆ. ಬಳಿಕ ಬೆಳಿಗ್ಗೆ 11:50ರ ಸುಮಾರಿಗೆ ಯೆಲ್ಲೋ ಲೈನ್‌ಗೆ ಹಸಿರು ನಿಶಾನೆ ತೋರಿಸಲಾಗುವುದು.

ಪ್ರಧಾನಿ ಭೇಟಿ ಹಿನ್ನಲೆಯಲ್ಲಿ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30ರವರೆಗೆ ನೈಸ್‌ರೋಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ವರೆಗೆ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ನಾಯಂಡಹಳ್ಳಿ, ಸೋಂಪುರ, ಪಿಇಎಸ್ ಕಾಲೇಜು, ಕೆಂಗೇರಿ, ಮಾಗಡಿ ರಸ್ತೆ, ಮಾಧವರ ರಸ್ತೆ ಮತ್ತು ಪಾರ್ಲೆ ಬಿಸ್ಕಟ್ ಫ್ಯಾಕ್ಟರಿ ಕಡೆಗಳಿಂದ ಬರುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆ, ಜಿಗಣಿ ಮಾರ್ಗದ ಮೂಲಕ ಹೊಸೂರು ರಸ್ತೆ ಅಥವಾ ಅತ್ತಿಬೆಲೆ–ಹೊಸೂರು ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ ಮಾರ್ಗವೂ ಬಳಸಬಹುದಾಗಿದೆ.

ಇದೇ ವೇಳೆ, ಬಿಎಂಆರ್‌ಸಿಎಲ್‌ ಪ್ರಕಟಣೆ ಪ್ರಕಾರ, ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಸಿರು ಮಾರ್ಗದ ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಲು ವಿನಂತಿಸಲಾಗಿದೆ.

ಸಂಚಾರ ಮತ್ತು ಮೆಟ್ರೋ ಸೇವೆಗಳ ತಾತ್ಕಾಲಿಕ ಬದಲಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಬಹುದಾದರೂ, ಅಧಿಕಾರಿಗಳು ಸಹಕಾರ ಕೋರಿ, ಕಾರ್ಯಕ್ರಮ ಯಶಸ್ವಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Must Read