ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡದೆ ಇರುವುದರ ಹಿಂದೆ ಕರ್ನಾಟಕದ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕೇರಳದಲ್ಲಿ ಕನ್ನಡಕ್ಕೆ ಧಕ್ಕೆ ಬರುತ್ತಿರುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮೊದಲೇ ತಿಳಿದಿತ್ತು. “ನೀನು ಹೊಡೆದಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ” ಎಂಬ ಒಪ್ಪಂದದಂತೆ ಇವರು ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಬರೆದಿರುವ ಪತ್ರ ಕೇವಲ ನಾಟಕೀಯವಾಗಿದ್ದು, ಇದು ಸಂಪೂರ್ಣವಾಗಿ ಮೊದಲೇ ನಿರ್ಧಾರಿತವಾದ ‘ಮ್ಯಾಚ್ ಫಿಕ್ಸಿಂಗ್’ ಎಂದು ಅವರು ಟೀಕಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಬುಲ್ಡೋಜರ್’ ಹೇಳಿಕೆ ನೀಡಿದಾಗ ಮೌನ ವಹಿಸಿದ್ದ ಸಿದ್ದರಾಮಯ್ಯ ಅವರ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ. ವೇದಿಕೆಯ ಮೇಲೆ ಕೇರಳ ಸಿಎಂ ಸಿಕ್ಕಾಗಲೇ ಈ ಬಗ್ಗೆ ಗಟ್ಟಿಯಾಗಿ ಮಾತನಾಡಬೇಕಿತ್ತು. ಆದರೆ, ಈಗ ಕೇವಲ ಪತ್ರ ಬರೆಯುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಅಥವಾ ಪ್ರಧಾನಿ ಮೋದಿ ವಿರುದ್ಧ ಸದಾ ಧ್ವನಿ ಎತ್ತುವ ಕಾಂಗ್ರೆಸ್ ನಾಯಕರು, ಈಗ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದರೂ ಏಕೆ ಮೌನವಾಗಿದ್ದಾರೆ? ರಾಜ್ಯ ಸರ್ಕಾರ ತಕ್ಷಣವೇ ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕು. ಇಲ್ಲವಾದಲ್ಲಿ, ಈ ಅನ್ಯಾಯದಲ್ಲಿ ಕಾಂಗ್ರೆಸ್ ನಾಯಕರು ನೇರವಾಗಿ ಶಾಮೀಲಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

