ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ)ಯು 7 ಪಾಕಿಸ್ತಾನಿ ಸೈನಿಕರನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದು, ಇದೀಗ ಸೈನಿಕರು ತಮ್ಮ ಜೀವಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಆದರೆ ಇತ್ತ ಪಾಕಿಸ್ತಾನ ಮಾತ್ರ ಆ ಯೋಧರು ನಮ್ಮವರಲ್ಲ ಎಂದು ಹೇಳುವ ಮೂಲಕ ದೇಶಕ್ಕಾಗಿ ಹೋರಾಡಿದ ಯೋಧರನ್ನು ನಡುದಾರಿಯಲ್ಲಿ ಕೈ ಬಿಟ್ಟಿದೆ.
ವೀಡಿಯೊದಲ್ಲಿ, ಸೈನಿಕನೋರ್ವ ತನ್ನ ಗುರುತಿನ ಚೀಟಿಯನ್ನು ತೋರಿಸುತ್ತಾ, ತಾನು ಪಾಕಿಸ್ತಾನಕ್ಕಾಗಿ ಹೋರಾಡಿದೆ ಆದರೆ ಇಂದು ಪಾಕಿಸ್ತಾನ ಸೈನ್ಯ ಹಾಗೂ ಸರ್ಕಾರ ನಮ್ಮನ್ನು ತಮ್ಮವರೆಂದು ಸ್ವೀಕರಿಸುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಬಿಎಲ್ಎ ಹೇಳಿಕೆಗಳ ಪ್ರಕಾರ, ಬಲೂಚಿಸ್ತಾನದಲ್ಲಿ ತನ್ನ ದಂಗೆಕೋರ ಕಾರ್ಯಾಚರಣೆಯ ಮುಂದುವರಿಕೆಯಾದ “ಆಪರೇಷನ್ ಹೆರೋಫ್ 2.0” ಎಂದು ಗುಂಪು ಉಲ್ಲೇಖಿಸುವ ಸಮಯದಲ್ಲಿ ಸೈನಿಕರನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಬಿಡುಗಡೆಗೆ ಪ್ರತಿಯಾಗಿ, ಬಿಎಲ್ಎ ಬಲೂಚ್ ಹೋರಾಟಗಾರರ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನವನ್ನು ಒತ್ತಾಯಿಸಿದೆ. ಇದಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಫೆಬ್ರವರಿ 22 ರವರೆಗೆ ಸಮಯ ನೀಡಲಾಗಿದೆ.
ಆದ್ರೆ ಪಾಕಿಸ್ತಾನ ಸೇನೆಯ ತನ್ನ ಯಾವುದೇ ಸೈನಿಕರು ಕಾಣೆಯಾಗಿಲ್ಲ ಅಥವಾ ಯಾವುದೇ ಉಗ್ರಗಾಮಿ ಸಂಘಟನೆಯ ವಶದಲ್ಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.
ಬಿಎಲ್ಎಯ ಅಧಿಕೃತ ಚಾನೆಲ್ ‘ಹಕ್ಕಾಲ್’ ನಲ್ಲಿ ಈ ವೀಡಿಯೋ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಬಿಎಲ್ಎ ಹೋರಾಟಗಾರರು ಸೆರೆಹಿಡಿಯಲಾದ ಸೈನಿಕರನ್ನು ಬಿಡುಗಡೆ ಮಾಡಿಕೊಳ್ಳಲು ಪಾಕಿಸ್ತಾನ ಸರ್ಕಾರಕ್ಕೆ 7 ದಿನಗಳ ಅಂತಿಮ ಗಡುವು ನೀಡಿದ್ದರು. ಆದರೆ ಅವರು ನಿಮ್ಮನ್ನು ತಮ್ಮವರೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ನೀವು ಪಾಕಿಸ್ತಾನಿ ಸೈನಿಕರು ಎಂದು ಹೇಗೆ ಸಾಬೀತುಪಡಿಸುತ್ತೀರಿ? ಎಂದು ಸೆರೆಯಾದ ಪಾಕ್ ಯೋಧರಿಗೆ ಪ್ರಶ್ನಿಸಿದ್ದು, ಈ ವೇಳೆ ಸೈನಿಕರು ಕ್ಯಾಮೆರಾ ಮುಂದೆ ತಮ್ಮ ಅಧಿಕೃತ ಸೇವಾ ಕಾರ್ಡ್ಗಳು ಮತ್ತು ಗುರುತಿನ ಚೀಟಿಗಳನ್ನು ತೋರಿಸುತ್ತಾ,ಇದು ಸೈನ್ಯದಿಂದ ಬಂದದ್ದು, ಅಲ್ಲವೇ? ಇದನ್ನೆಲ್ಲಾ ನಮಗೆ ಕೊಟ್ಟವರು ಅವರೇ. ನಾವು ಇದನ್ನು ನಾವೇ ತಯಾರಿಸಲಿಲ್ಲ. ಅವರು ನಮ್ಮ ಜನರಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಭಾವುಕರಾಗಿದ್ದಾರೆ.
ಆದರೆ ದಾಖಲೆ ಸಮೇತ ವಿಡಿಯೋ ಬಿಡುಗಡೆ ಮಾಡಿದರೂ ,ಪಾಕಿಸ್ತಾನ ನಮ್ಮ ಯಾವುದೇ ಸೈನಿಕರು ಕಾಣೆಯಾಗಿಲ್ಲ ಎಂದು ಹೇಳಿದೆ.



