ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಶೈಲಿಯಿಂದ ವಿಶ್ವದಾದ್ಯಂತ “ಮಿಸ್ಟರ್ 360 ಡಿಗ್ರಿ” ಎಂಬ ಬಿರುದಿಗೆ ಪಾತ್ರರಾದ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಏಷ್ಯಾ ಕಪ್‌ನಲ್ಲಿ ನಿರಾಶಾಜನಕ ಪ್ರದರ್ಶನ ನೀಡಿದ ಅವರು, ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ತನ್ನ ಬ್ಯಾಟಿಂಗ್‌ನ ಹೊಳಪನ್ನು ತೋರಿಸಿಲ್ಲ. ಈ ಸಂಕಷ್ಟದ ನಡುವೆ ಸೂರ್ಯಕುಮಾರ್ ಯಾದವ್ ಇದೀಗ ತಮ್ಮ ಆಟದಲ್ಲಿ ಹೊಸ ತಿರುವು ತರಲು ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಅವರಿಂದ ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ನನಗೆ ಟಿ20 ಮತ್ತು ಏಕದಿನ ಎರಡೂ ಸ್ವರೂಪಗಳಲ್ಲಿ ಭಾರತಕ್ಕಾಗಿ ಆಡುವ ಕನಸು ಇದೆ. ಟಿ20 ತಂಡದಲ್ಲಿ ನಾನು ನನ್ನ ಸ್ಥಾನ ಸ್ಥಿರಗೊಳಿಸಿದ್ದೇನೆ, ಆದರೆ ಏಕದಿನ ತಂಡದಲ್ಲಿ ಅದೇ ಮಟ್ಟದ ಸ್ಥಿರತೆ ತರುವಲ್ಲಿ ವಿಫಲನಾಗಿದ್ದೇನೆ” ಎಂದಿದ್ದಾರೆ.
ಸೂರ್ಯಕುಮಾರ್ ಮುಂದುವರಿದು, “ಎಬಿ ಡಿವಿಲಿಯರ್ಸ್ ಅವರು ಟಿ20 ಮತ್ತು ಏಕದಿನ ಕ್ರಿಕೆಟ್ ಎರಡನ್ನೂ ಸಮತೋಲನಗೊಳಿಸುವಲ್ಲಿ ಎಂತಹ ಕೌಶಲ್ಯ ತೋರಿಸಿದ್ದರು ಎಂಬುದನ್ನು ತಿಳಿಯಲು ನಾನು ಅವರಿಂದ ಸಲಹೆ ಪಡೆಯಲು ಬಯಸುತ್ತೇನೆ. ನಾನು ಆಗಾಗ್ಗೆ ಎರಡೂ ಸ್ವರೂಪಗಳಲ್ಲಿ ಪ್ರಯತ್ನಿಸಿದ್ದೇನೆ, ಆದರೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಲಿ ಎಂದು ನಾನು ಬಯಸುತ್ತೇನೆ,” ಎಂದಿದ್ದಾರೆ.
ಸೂರ್ಯಕುಮಾರ್ ತಮ್ಮ ವೃತ್ತಿಜೀವನದ ಮುಂದಿನ ಹಂತದ ಬಗ್ಗೆ ಮಾತನಾಡುತ್ತಾ, “ನನ್ನ ಮುಂದೆ ಮೂರು ಅಥವಾ ನಾಲ್ಕು ಪ್ರಮುಖ ವರ್ಷಗಳಿವೆ. ನಾನು ಈ ಅವಧಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ನನ್ನ ಛಾಪು ಮೂಡಿಸಲು ಉತ್ಸುಕನಾಗಿದ್ದೇನೆ. ಅದಕ್ಕಾಗಿ ಎಬಿಡಿಯ ಸಲಹೆ ನನಗೆ ಬಹಳ ಉಪಕಾರಿಯಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಟಿ20 ತಂಡದ ಖಾಯಂ ಸದಸ್ಯರಾಗಿರುವ ಸೂರ್ಯಕುಮಾರ್ ಯಾದವ್, ಮತ್ತೆ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನ ದಂತಕಥೆ ಎಬಿ ಡಿವಿಲಿಯರ್ಸ್ ಅವರಿಂದ ಮಾರ್ಗದರ್ಶನ ಪಡೆಯಲು ಉತ್ಸುಕನಾಗಿರುವ ಅವರು, ಶೀಘ್ರದಲ್ಲೇ ಈ ಇಬ್ಬರು “ಮಿಸ್ಟರ್ 360 ಡಿಗ್ರಿ” ಕ್ರಿಕೆಟಿಗರು ಭೇಟಿಯಾಗುವ ಸಾಧ್ಯತೆ ಇದೆ.

