ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಮ್ ವರ್ಕ್ ಮಾಡದೇ ಬಂದ ಮಕ್ಕಳಿಗೆ ಟೀಚರ್ಸ್ ಒಂದೇಟು ಕೊಡೋದು ಮಾಮೂಲಿ. ಆದರೆ ಇಲ್ಲೊಬ್ಬ ಶಿಕ್ಷಕಿ ಹೋಮ್ ವರ್ಕ್ ಮಾಡದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಇಷ್ಟೇ ಅಲ್ಲದೆ ಹೊಡೆದ ವಿಷಯ ಮನೆಯಲ್ಲಿ ಹೇಳಿದರೆ ಮತ್ತೆ ಹೊಡೆಯುತ್ತೀನಿ ಎಂದು ಗದರಿಸಿದ್ದಾರೆ. ಇದರಿಂದ ಬಾಲಕ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ.
ನಾಲ್ಕನೇ ತರಗತಿ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ವಿರುದ್ಧ ಕೇಳಿಬಂದಿದೆ. ಲಕ್ಷ್ಮೀದೇವಿನಗರದಲ್ಲಿರುವ ಖಾಸಗಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ವಿರುದ್ಧ ಆರೋಪ ಕೇಳಿಬಂದಿದ್ದು, 10 ವರ್ಷದ ನೊಂದ ಬಾಲಕನ ತಾಯಿ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಶಿಕ್ಷಕಿ ಆ್ಯಂಗ್ಲಿನಾ ಹಾಗೂ ಶಾಲೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Viral| ದೇಗುಲದ ಆವರಣದಲ್ಲಿ ಫೋಟೋಶೂಟ್: ‘ಜಸ್ಟ್ ಮ್ಯಾರೀಡ್’ ಕಪಲ್ಸ್ ಗೆ ಭಕ್ತರಿಂದ ಕ್ಲಾಸ್!
ಜನವರಿ 10ರಂದು ಶಾಲೆಗೆ ಹೋಗಿದ್ದ ಬಾಲಕ ಹೋಮ್ ವರ್ಕ್ ಮಾಡಿಲ್ಲವೆಂದು ಶಾಲೆಯ ಶಿಕ್ಷಕಿ ಆ್ಯಂಗ್ಲಿನಾ ಬಾಸುಂಡೆ ಬರುವಂತೆ ಹಲ್ಲೆಗೈದಿದ್ದಾರೆ. ಅಲ್ಲದೆ, ಹಲ್ಲೆಯ ವಿಚಾರ ಯಾರಿಗಾದರೂ ಹೇಳಿದರೆ ಮತ್ತೆ ಥಳಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 10ರಂದು ಬಾಲಕನ ತಾಯಿ ಮಗನನ್ನು ನೋಡಲು ಹೋದಾಗ ಹಲ್ಲೆಯ ವಿಚಾರ ತಿಳಿದಿದೆ. ಶಾಲಾ ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸಿದಾಗ, ಆ್ಯಂಗ್ಲಿನಾರನ್ನು ಸಸ್ಪೆಂಡ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಸಸ್ಪೆಂಡ್ ಮಾಡಿಲ್ಲ ಎಂದು ಬಾಲಕನ ತಾಯಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೊತೆಗೆ, ಎರಡು ತಿಂಗಳಿನಿಂದ ಮಗನಿಗೆ ಬೆದರಿಸುವುದು, ಹಲ್ಲೆ ಮಾಡುವುದನ್ನು ಮಾಡಿದ್ದಾರೆ. ಟೀಚರ್ನ್ನು ಪ್ರಶ್ನಿಸಿದರೆ ಅವನು ಚೆನ್ನಾಗಿ ಓದಲಿ ಎಂದು ಹೊಡೆದೆ ಅಂತಾರೆ. ಮೂರ್ನಾಲ್ಕು ದಿನವಾದರೂ ಬಾಸುಂಡೆ ಹೋಗದೆ ಇರುವ ಥರ ಹೊಡೆಯುತ್ತಾರಾ? ಈಗ ನನ್ನ ಮಗ ಆ ಶಾಲೆಗೆ ಹೋಗಲ್ಲ ಅಂತಾ ಹಠ ಮಾಡುತ್ತಿದ್ದಾನೆ ಎಂದು ಬಾಲಕನ ತಾಯಿ ಲಕ್ಷ್ಮೀ ತಿಳಿಸಿದ್ದಾರೆ.



