ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಅಧಿವೇಶನದಲ್ಲಿ ಇಂದು ಆಪರೇಷನ್ ಸಿಂದೂರ್ ಚರ್ಚೆ ನಡೆಯುತ್ತಿದ್ದು, ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚರ್ಚೆ ಪ್ರಾರಂಭಿಸಿದರು.
ಬಳಿಕ ಸದನದಲ್ಲಿ ಆಪರೇಷನ್ ಸಿಂದೂರ್ ಕುರಿತು ಚರ್ಚೆಯ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಕಾಂಗ್ರೆಸ್ ಸಂಸದರು ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಪಕ್ಷಗಳು ಭಾರತದ ವಿದೇಶಾಂಗ ಸಚಿವರ ಮಾತಿಗಿಂತ ವಿದೇಶಿ ದೇಶಗಳನ್ನೇ ಹೆಚ್ಚು ನಂಬುತ್ತವೆ ಎಂದು ಆರೋಪಿಸಿದರು.
ವಿಪಕ್ಷಗಳಿಗೆ ಭಾರತದ ವಿದೇಶಾಂಗ ಸಚಿವರ ಮೇಲೆ ನಂಬಿಕೆ ಇಲ್ಲ, ಆದರೆ ಇತರ ದೇಶಗಳ ಮೇಲೆ ನಂಬಿಕೆ ಇದೆ. ಅವರ ಪಕ್ಷದಲ್ಲಿ ವಿದೇಶಿಯರ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ಅದನ್ನು ಸದನದ ಕಲಾಪದ ಮೇಲೆ ಹೇರಬಾರದು. ಇದೇ ಕಾರಣಕ್ಕಾಗಿ ನೀವು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತಿದ್ದೀರಿ, ಮುಂದಿನ 20 ವರ್ಷವೂ ನೀವು ಅಲ್ಲಿಯೇ ಇರುತ್ತೀರಿ ಎಂದು ಗುಡುಗಿದರು.
ವಿಪಕ್ಷದವರಿಗೆ ಸತ್ಯವನ್ನು ಕೇಳಲು ಸಾಧ್ಯವಾಗುತ್ತಿಲ್ಲ. ನಾವೂ ಕೂಡ ಭಾಷಣಗಳಿಗೆ ಅಡ್ಡಿಪಡಿಸಬಹುದು, ಆದರೆ ಇಂತಹ ಪ್ರಮುಖ ವಿಷಯದ ಬಗ್ಗೆ ಚರ್ಚೆ ನಡೆಯುವಾಗ, ವಿದೇಶಾಂಗ ಸಚಿವರನ್ನು ಈ ರೀತಿ ಅಡ್ಡಿಪಡಿಸುವುದು ಸರಿಯೇ? ಸ್ಪೀಕರ್ ರವರೇ, ಇದನ್ನು ವಿಪಕ್ಷಕ್ಕೆ ಮನವರಿಕೆ ಮಾಡಿ, ಇಲ್ಲವಾದರೆ ನಮ್ಮ ಸದಸ್ಯರನ್ನೂ ನಾವು ತಡೆಯಲಾರೆವುಎಂದು ಎಚ್ಚರಿಸಿದರು.