ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಕ್ರಿಕೆಟ್ ಲೋಕವನ್ನು ಮತ್ತೊಮ್ಮೆ ನಿಬ್ಬೆರಗುಗೊಳಿಸುವಂತಹ ದುರ್ಘಟನೆಯೊಂದು ನಡೆದಿದೆ. ಕೇವಲ 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ (Ben Austin) ಅಭ್ಯಾಸದ ವೇಳೆ ಚೆಂಡು ಬಡಿದು ಸಾವನ್ನಪ್ಪಿದ್ದಾರೆ. ಈ ಘಟನೆ 2014ರಲ್ಲಿ ಫಿಲ್ ಹ್ಯೂಸ್ ಸಾವನ್ನು ನೆನಪಿಸುವಂತಾಗಿದೆ.
ಮೆಲ್ಬೋರ್ನ್‌ನ ಫರ್ನ್‌ಟ್ರೀ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದ ಬೆನ್ ಆಸ್ಟಿನ್, ಅಕ್ಟೋಬರ್ 28 ರಂದು ಬೌಲಿಂಗ್ ಯಂತ್ರದ ಮೂಲಕ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ವೇಗವಾಗಿ ಬಂದ ಚೆಂಡು ಅವರ ಕುತ್ತಿಗೆ ಭಾಗಕ್ಕೆ ಬಡಿದು, ಅವರು ತಕ್ಷಣವೇ ಕುಸಿದು ಬಿದ್ದರು. ಹೆಲ್ಮೆಟ್ ಧರಿಸಿದ್ದರೂ ಆಘಾತದ ತೀವ್ರತೆ ಹೆಚ್ಚು ಇದ್ದುದರಿಂದ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ, ಅಕ್ಟೋಬರ್ 30 ರಂದು ಬೆನ್ ಆಸ್ಟಿನ್ ನಿಧನರಾದರು ಎಂದು ಕ್ಲಬ್ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಆಸ್ಟಿನ್ ಅವರು ಆಸ್ಟ್ರೇಲಿಯಾ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಂಡಿದ್ದರು ಮತ್ತು ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿದ್ದರು ಎಂದು ತಂಡದ ಕೋಚ್ ತಿಳಿಸಿದ್ದಾರೆ.
ಫಿಲ್ ಹ್ಯೂಸ್ ನೆನಪಿಗೆ ಬಂದ ಘಟನೆ:
2014ರ ನವೆಂಬರ್ 25ರಂದು ನಡೆದ ದೇಶೀಯ ಪಂದ್ಯದಲ್ಲಿ ಫಿಲ್ ಹ್ಯೂಸ್ ಅವರಿಗೆ ಶಾನ್ ಅಬಾಟ್ ಎಸೆದ ಚೆಂಡು ತಲೆಯ ಹಿಂಭಾಗಕ್ಕೆ ತಾಗಿ, ಅವರು ಆಸ್ಪತ್ರೆಯಲ್ಲಿ ಎರಡು ದಿನಗಳ ನಂತರ ಪ್ರಾಣ ಕಳೆದುಕೊಂಡಿದ್ದರು. ಇದೀಗ ಬೆನ್ ಆಸ್ಟಿನ್ ಅವರ ದಾರುಣ ಸಾವು ಅದೇ ರೀತಿಯ ಸಂದರ್ಭವನ್ನು ನೆನಪಿಸಿದೆ.

