ಹೊಸದಿಗಂತ ವರದಿ ಮಳವಳ್ಳಿ:
ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಅವ್ವೇರಹಳ್ಳಿ – ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ವಾಸಿ ಮಹಾದೇವ ಸ್ವಾಮಿ ಎಂಬುವರ ಮಗನಾದ 24 ವರ್ಷದ ಮೋಹನ್ ಕುಮಾರ್ ಎಂಬಾತನೇ ಕೊಲೆಯಾಗಿರುವ ಯುವಕ.
ಗುರುವಾರ ರಾತ್ರಿ 10.30 ರ ಸಮಯದಲ್ಲಿ ಮೋಹನ್ ಕುಮಾರ್ ಅವ್ವೇರಹಳ್ಳಿ ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯ ಬಳಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಯಾರೋ ದುಷ್ಕರ್ಮಿಗಳು ಮುಖದ ಮೇಲೆಲ್ಲಾ ಗಾಯ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈತನ ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಸುದ್ದಿ ತಿಳಿದು ಸ್ಥಳಕ್ಕೆ ಧಾವಿದಿರುವ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್ ಅವರು ಪರಿಶೀಲನೆ ನಡೆಸಿದ್ದಾರೆ. ಮೃತನ ತಂದೆ ಮಹಾದೇವಸ್ವಾಮಿ ಶುಕ್ರವಾರ ನೀಡಿದ ದೂರಿನ ಮೇರೆಗೆ ಬೆಳಕವಾಡಿ ಪಿಎಸ್ ಐ ಪ್ರಕಾಶ್ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.