ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‍ನಲ್ಲಿ ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್ ನಲ್ಲಿ ಇತ್ತೀಚೆಗೆ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ ಮಾಂಸ ತಿನ್ನುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಎಲ್ಲೆಡೆ ಆಕ್ರೋಶಕ್ಕೂ ಕಾರಣವಾಗಿತ್ತು.
ಇದೀಗ ಇಸ್ಕಾನ್ ಭಕ್ತರು ಕೆಎಫ್‍ಸಿ ಮೇಲೆ ಶಾಂತ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಇತ್ತೀಚೆಗೆ ಇಸ್ಕಾನ್ ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಒಳಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಸಿಬ್ಬಂದಿಗೆ ಮಾಂಸಾಹಾರಿ ಆಹಾರ ಲಭ್ಯವಿದೆಯೇ ಎಂದು ಕೇಳಿದ್ದಾನೆ. ಇಲ್ಲಿ ಸಸ್ಯಾಹಾರಿ ಊಟ ಮಾತ್ರ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆ ಬಳಿಕ ಆತ, ಕೆಎಫ್‌ಸಿ ಚಿಕನ್ ಬಾಕ್ಸ್ ಅನ್ನು ಹೊರತೆಗೆದು ಆವರಣದೊಳಗೆ ತಿನ್ನಲು ಪ್ರಾರಂಭಿಸಿದ್ದಾನೆ. ಅಲ್ಲದೆ, ಅಲ್ಲಿದ್ದ ಸಿಬ್ಬಂದಿ ಮತ್ತು ಇತರೆ ಊಟ ಮಾಡುತ್ತಿದ್ದವರಿಗೆ ಮಾಂಸವನ್ನು ನೀಡುತ್ತಾನೆ. ಅವನ ಈ ಕೃತ್ಯದಿಂದ ಅಲ್ಲಿದ್ದವರಿಗೆ ಇರಿಸುಮುರುಸು ಉಂಟಾಯಿತು. ಅಂತಿಮವಾಗಿ ಅವನನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು.
ಈ ಘಟನೆಯ ನಂತರ ಇಸ್ಕಾನ್ ಭಕ್ತರು ಶಾಂತವಾಗಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಇಬ್ಬರು ಇಸ್ಕಾನ್ ಸಂತರು ಕೆಎಫ್‌ಸಿ ಔಟ್‌ಲೆಟ್‌ನ ಹೊರಗೆ ನಿಂತು ಹರೇ ರಾಮ ಹರೇ ಕೃಷ್ಣ ಎಂದು ಜಪಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅತ್ಯಂತ ಶಾಂತ ರೀತಿಯ ಪ್ರತೀಕಾರ ಎಂದು ಕರೆದಿದ್ದಾರೆ.
ಅವರು ನಮ್ಮ ರೆಸ್ಟೋರೆಂಟ್‌ಗಳಿಗೆ ಕಿರುಕುಳ ನೀಡಲು ಬರುತ್ತಾರೆ. ಆದರೆ, ನಾವು ಅವರ ಪ್ರಜ್ಞೆಯನ್ನು ಹೆಚ್ಚಿಸಲು ಬರುತ್ತೇವೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ಅಮಾನವೀಯ ಕೃತ್ಯದ ಅಪರಾಧಿಗಳನ್ನು ನಾವು ಕ್ಷಮಿಸುತ್ತೇವೆ ಮತ್ತು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ. ಅಚ್ಚರಿ ಎಂದರೆ ಅತ್ತ ಕೆಎಫ್ ಸಿ ಸಿಬ್ಬಂದಿಗಳ ಕೂಡ ಇಸ್ಕಾನ್ ಪ್ರತಿನಿಧಿಗಳ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವರದಿಯ ಪ್ರಕಾರ, ಲಂಡನ್ ಪೊಲೀಸರು ಪ್ರಸ್ತುತ ಈ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.