Sunday, November 16, 2025

ಪತ್ನಿಗೆ ವಿಡಿಯೋ ಕರೆ ಮಾಡಿ ನೇಣಿಗೆ ಕೊರಳೊಡ್ಡಿದ ಯುವಕ

ಹೊಸದಿಗಂತ ವರದಿ,ಮಡಿಕೇರಿ:

ಕಾಳು ಮೆಣಸು ಕಳವು ಪ್ರಕರಣದಲ್ಲಿ ಜೈಲು ಸೇರಿ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಯುವಕನೊಬ್ಬ ಪತ್ನಿಗೆ ಲೈವ್ ಕರೆ ಮಾಡಿ ನೇಣಿಗೆ ಶರಣಾದ ಘಟನೆ‌ ಇಲ್ಲಿಗೆ ಸಮೀಪದ ಸಿಂಕೋನ ಬಳಿ ನಡೆದಿದೆ.

ಮೃತನನ್ನು ಸೋಮವಾರಪೇಟೆ‌ ಸಮೀಪದ ಕಿಬ್ಬೆಟ್ಟ ಗ್ರಾಮದ ಕೀರ್ತಿ ಕುಮಾರ್ (36) ಎಂದು ಗುರುತಿಸಲಾಗಿದೆ.

ಯಡವಾರೆ ಗ್ರಾಮದ ಕಾಫಿ ತೋಟದಲ್ಲಿ ಕಾಳು ಮೆಣಸು ಕದ್ದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಕೀರ್ತಿ ಕುಮಾರ್ ಸುಮಾರು 15 ದಿನಗಳ ಹಿಂದೆ ಜಾಮೀನು ಪಡೆದು ಹೊರ ಬ‌ಂದಿದ್ದ. ತವರಿಗೆ ತೆರಳಿದ್ದ‌ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದ. ಆದರೆ ಆಕೆ ಬರದಿರುವ ಹಿನ್ನೆಲೆಯಲ್ಲಿ‌ ಶನಿವಾರ ಮಧ್ಯಾಹ್ನ ಕೀರ್ತಿ ಕುಮಾರ್, ಬೋಯಿಕೇರಿ ಸಮೀಪದ ಸಿಂಕೋನದಲ್ಲಿರುವ ದೇವಸ್ಥಾನದ ಹತ್ತಿರದ ತೋಟಕ್ಕೆ ತೆರಳಿದ್ದ. ಅಲ್ಲಿಂದ ಊರಿನಲ್ಲಿದ್ದ ತನ್ನ ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ ವೇಳೆ, ಮರಕ್ಕೆ ನೇಣು ಬಿಗಿದುಕೊಂಡು ಪತ್ನಿಯ ಕಣ್ಣೆದುರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

error: Content is protected !!