ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ರಸ್ತೆಯಲ್ಲಿ ನಿಂತಿದ್ದ ಯುವತಿಯ ಬಳಿ ಬರುತ್ತಾರೆ. ಅವರಲ್ಲಿ ಒಬ್ಬ ಯುವಕ ವಾಹನದಿಂದ ಇಳಿದು, ಯಾವುದೇ ಪ್ರಚೋದನೆ ಇಲ್ಲದೆ ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸಿ ತಕ್ಷಣ ಬೈಕ್ ಹತ್ತಿ ಪರಾರಿಯಾಗುತ್ತಾನೆ. ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಯುವತಿ, ಏನಾಗುತ್ತಿದೆ ಎಂದು ಅರಿವಾಗದೆ ಆ ಕ್ಷಣಕ್ಕೆ ಸುಮ್ಮನೆ ನಿಂತಿರುವುದು ಕಂಡುಬಂದಿದೆ.
ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಕಿರುಕುಳದ ವಿಡಿಯೋ ವೈರಲ್ ಆದ ಕೂಡಲೇ, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಝಾನ್ಸಿ ಪೊಲೀಸರು, ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ.

