ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯಲ್ಲಿ ಬಲಿಯಾದ ಅಭಿಮಾನಿಗಳ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಇನ್ನುಮುಂದೆ ‘ಆರ್‌ಸಿಬಿ ಕೇರ್ಸ್’ ಮೂಲಕ ತನ್ನ 12th ಮ್ಯಾನ್ ಆರ್ಮಿಯೊಂದಿಗೆ ಸದಾ ನಿಲ್ಲವುದಾಗಿ ತಿಳಿಸಿದೆ.
ಇದೀಗ ಜೂನ್ 4ರ ಅವಘಡದ ಕುರಿತು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ. ತಂಡದ ಪರವಾಗಿ ಕೋಟ್ಯಂತರ ಅಭಿಮಾನಿಗಳನ್ನು ಉದ್ದೇಶಿಸಿ ವಿರಾಟ್ ಕೊಹ್ಲಿ ನೀಡಿರುವ ಪ್ರತಿಕ್ರಿಯೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಜೀವನದಲ್ಲಿ ಯಾವುದೂ ಸಹ ಜೂನ್ 4ರಂದು ಸಂಭವಿಸಿದಂತಹ ಹೃದಯ ಚೂರಾಗುವ ಘಟನೆಗಳಿಗೆ ನಮ್ಮನ್ನು ಸಿದ್ಧಪಡಿಸಿರುವುದಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕವಾಗಿ ಇರಬೇಕಿದ್ದ ಕ್ಷಣವು ದುರಂತವಾಗಿ ಮಾರ್ಪಟ್ಟಿತು. ಜೀವ ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ನಾವು ಮುಂದುವರೆಯೋಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.