ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಇಂದು ಗೂಗಲ್‌ನಲ್ಲಿ ಏನನ್ನಾದರೂ ಹುಡುಕಲು ಹೋಗಿ ವಿಫಲರಾಗಿದ್ದೀರಾ? ಅಥವಾ ಯೂಟ್ಯೂಬ್ ವಿಡಿಯೋಗಳು ಪ್ಲೇ ಆಗದೆ ‘ಬಫರಿಂಗ್’ ಆಗುತ್ತಿವೆಯೇ? ಹಾಗಿದ್ದರೆ ಇದು ಕೇವಲ ನಿಮ್ಮ ಫೋನ್ ಅಥವಾ ಇಂಟರ್ನೆಟ್ ಸಮಸ್ಯೆಯಲ್ಲ. ಜಗತ್ತಿನ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅಮೆರಿಕ ಹಾಗೂ ಭಾರತದಾದ್ಯಂತ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ.
ಯುಎಸ್ ಮೂಲದ ಟೆಕ್ ದೈತ್ಯ ಗೂಗಲ್‌ನ ಸರ್ವರ್‌ಗಳಲ್ಲಿ ಏಕಾಏಕಿ ವ್ಯತ್ಯಯ ಉಂಟಾಗಿದ್ದು, ಬಳಕೆದಾರರು ಮಾಹಿತಿ ಹುಡುಕಲು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಪರದಾಡುವಂತಾಗಿದೆ. ಪ್ರಮುಖವಾಗಿ ಗೂಗಲ್ ಸರ್ಚ್, ಯೂಟ್ಯೂಬ್ ಮತ್ತು ಯೂಟ್ಯೂಬ್ ಸೇವೆಗಳು ಈ ಸಮಸ್ಯೆಯಿಂದ ಬಾಧಿತವಾಗಿವೆ.
ಜಾಗತಿಕ ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಆದ ‘ಡೌನ್‌ಡೆಕ್ಟರ್’ ನೀಡಿರುವ ಮಾಹಿತಿಯ ಪ್ರಕಾರ ಸಮಸ್ಯೆಯ ತೀವ್ರತೆ ಹೀಗಿದೆ:
ಒಟ್ಟು ದೂರುಗಳು: ಜಾಗತಿಕವಾಗಿ 11,000ಕ್ಕೂ ಹೆಚ್ಚು ಬಳಕೆದಾರರು ದೂರು ನೀಡಿದ್ದಾರೆ.
ಭಾರತದಲ್ಲಿನ ಪರಿಸ್ಥಿತಿ: ಭಾರತವೊಂದರಲ್ಲೇ ಸುಮಾರು 3,336 ವರದಿಗಳು ದಾಖಲಾಗಿವೆ.
ಯೂಟ್ಯೂಬ್ ಸಮಸ್ಯೆಗಳು: ಶೇ. 53 ರಷ್ಟು ಜನರಿಗೆ ಸರ್ವರ್ ಸಂಪರ್ಕದ ಸಮಸ್ಯೆ.
ಶೇ. 34 ರಷ್ಟು ಜನರಿಗೆ ವೆಬ್‌ಸೈಟ್ ಓಪನ್ ಆಗುತ್ತಿಲ್ಲ.
ಶೇ. 13 ರಷ್ಟು ಜನರಿಗೆ ವಿಡಿಯೋ ಸ್ಟ್ರೀಮಿಂಗ್ ಅಡಚಣೆ.
ಹೆಚ್ಚಿನ ಬಳಕೆದಾರರು ಗೂಗಲ್ ವೆಬ್‌ಸೈಟ್ ಸರಿಯಾಗಿ ಲೋಡ್ ಆಗದಿರುವ ಬಗ್ಗೆ ದೂರು ನೀಡಿದ್ದಾರೆ. ಯೂಟ್ಯೂಬ್ ಆ್ಯಪ್ ಬಳಸುವವರಿಗಿಂತ ವೆಬ್‌ಸೈಟ್ ಮೂಲಕ ವಿಡಿಯೋ ನೋಡುವವರಿಗೆ (ಸುಮಾರು ಶೇ. 73) ಹೆಚ್ಚಿನ ತೊಂದರೆಯಾಗಿದೆ ಎಂದು ವರದಿಯಾಗಿದೆ. ಈ ಹಠಾತ್ ತಾಂತ್ರಿಕ ದೋಷದಿಂದಾಗಿ ಕೆಲಸದ ನಡುವೆ ಮಾಹಿತಿ ಬೇಕಿದ್ದವರು ಮತ್ತು ಮನರಂಜನೆ ಬಯಸಿದ್ದವರು ಅಕ್ಷರಶಃ ಕಂಗಾಲಾಗಿದ್ದಾರೆ.

