ಹೊಸದಿಗಂತ ಡಿಜಿಟಲ್ ಡೆಸ್ಕ್:
2025ನೇ ವರ್ಷ ಮುಗಿಯುತ್ತಾ ಬಂದಿದೆ. ಕಳೆದ ತಿಂಗಳು ನವೆಂಬರ್ ವರೆಗೆ ರಾಜ್ಯದಲ್ಲಿ ಈ ವರ್ಷ ಒಂದೂ ಒಂದು ಡೆಂಗ್ಯೂ ಜ್ವರದ ಸಾವು ವರದಿಯಾಗಿಲ್ಲ. ಇದು ಹಲವಾರು ವರ್ಷಗಳ ನಂತರ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಮುಖ ಸಾಧನೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ರಾಜ್ಯಸಭೆಯ ಮುಂದೆ ಈ ಅಂಕಿಅಂಶ ಮಂಡಿಸಿತು.
ಸಚಿವಾಲಯವು ಸಲ್ಲಿಸಿದ ಅಂಕಿಅಂಶಗಳು 2025 ರಲ್ಲಿ ನವೆಂಬರ್ ವರೆಗೆ 6,759 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆದರೆ ಯಾವುದೇ ಸಾವು ದಾಖಲಾಗಿಲ್ಲ ಎಂದು ತೋರಿಸುತ್ತವೆ. 2024 ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಸುಮಾರು ಶೇಕಡಾ 80ರಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಕಳೆದ ಆರು ವರ್ಷಗಳ ಡೆಂಗ್ಯೂ ಪ್ರಕರಣ ನೋಡಿದರೆ 2025 ರಲ್ಲಿ ಕರ್ನಾಟಕದ ಸುಧಾರಣೆಯ ಪ್ರಮಾಣ ಎಷ್ಟು ಎಂಬುದನ್ನು ತೋರಿಸುತ್ತದೆ. 2019 ರಲ್ಲಿ, ರಾಜ್ಯವು 16,986 ಪ್ರಕರಣಗಳು ಮತ್ತು 13 ಸಾವುಗಳನ್ನು ವರದಿ ಮಾಡಿದೆ. ಇದರ ನಂತರ 2020 ರಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, 3,823 ಪ್ರಕರಣಗಳು ಮತ್ತು ಯಾವುದೇ ಸಾವುಗಳು ದಾಖಲಾಗಿಲ್ಲ.
2021 ರಲ್ಲಿ 7,393 ಪ್ರಕರಣಗಳು ಮತ್ತು ಏಳು ಸಾವುಗಳು ವರದಿಯಾಗಿದ್ದವು. ರೋಗದ ಹೊರೆ ಮತ್ತೆ ಏರಿಕೆಯಾಗಿ 2022 ರಲ್ಲಿ, ಅಂಕಿಅಂಶಗಳು 9,889 ಪ್ರಕರಣಗಳು ಮತ್ತು ಒಂಬತ್ತು ಸಾವುಗಳನ್ನು ಕಂಡಿದ್ದವು. 2023 ರಲ್ಲಿ ಡೆಂಗ್ಯೂ ಪ್ರಕರಣಗಳು 19,300 ಕ್ಕೆ ಏರಿಕೆಯಾಗಿ 11 ಸಾವುಗಳು ಮತ್ತು 2024 ರಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. 32,886 ಪ್ರಕರಣಗಳು ಮತ್ತು 27 ಸಾವುಗಳು ವರದಿಯಾಗಿದ್ದವು.

