March 17, 2026
Tuesday, March 17, 2026
spot_img

ಮೊದಲ ಪಂದ್ಯದಲ್ಲಿ ‘Zero’, ಎರಡನೇ ಪಂದ್ಯದಲ್ಲಿ ‘Hero’: ದ.ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ಗೆ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಮುಗ್ಗರಿಸಿದ್ದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿ ಈಗ ರೋಚಕ ಹಂತಕ್ಕೆ ತಲುಪಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲುಂಡಿದ್ದ ನ್ಯೂಜಿಲೆಂಡ್, ಎರಡನೇ ಪಂದ್ಯದಲ್ಲಿ ಹರಿಣಗಳ ವಿರುದ್ಧ 68 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯು 1-1 ರಿಂದ ಸಮಬಲಗೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಹ್ಯಾಮಿಲ್ಟನ್‌ನ ಕಠಿಣ ಪಿಚ್‌ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಡೆವೊನ್ ಕಾನ್ವೇ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 60 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಅಂತ್ಯದಲ್ಲಿ ಜೋಶ್ ಕ್ಲಾರ್ಕ್ಸನ್ ಕೇವಲ 9 ಎಸೆತಗಳಲ್ಲಿ ಅಜೇಯ 26 ರನ್ ಚಚ್ಚಿದರೆ, ನಾಯಕ ಸ್ಯಾಂಟ್ನರ್ (20) ಮತ್ತು ನಿಕ್ ಕೆಲ್ಲಿ (21) ಉಪಯುಕ್ತ ಕಾಣಿಕೆ ನೀಡಿದರು. ನಿಗದಿತ ಓವರ್‌ಗಳಲ್ಲಿ ಕಿವೀಸ್ ಪಡೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

176 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕಿವೀಸ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿತು. ತಂಡದ ಅಗ್ರ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ 20 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ಜಾರ್ಜ್ ಲಿಂಡೆ (33 ರನ್) ಏಕಾಂಗಿ ಹೋರಾಟ ನಡೆಸಿದರೂ ಅವರಿಗೆ ಉಳಿದವರಿಂದ ಬೆಂಬಲ ಸಿಗಲಿಲ್ಲ. ಒಂದು ಹಂತದಲ್ಲಿ 89 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ, ಕೇವಲ 18 ರನ್‌ಗಳ ಅಂತರದಲ್ಲಿ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡು 107 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಕೊನೆಯ ಮೂವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆಗಿದ್ದು ತಂಡದ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ನ್ಯೂಜಿಲೆಂಡ್ ಪರ ಬೆನ್ ಸಿಯರ್ಸ್ (14ಕ್ಕೆ 3) ಮತ್ತು ಲಾಕಿ ಫರ್ಗುಸನ್ (3 ವಿಕೆಟ್) ಆಫ್ರಿಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನಾಯಕ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರೆ, ಮೆಕ್‌ಕಾಂಚಿ ಮತ್ತು ನೀಶಮ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇವಲ 91 ರನ್‌ಗಳಿಗೆ ಆಲೌಟ್ ಮಾಡಿ 7 ವಿಕೆಟ್‌ಗಳ ಗೆಲುವು ದಾಖಲಿಸಿದ್ದ ದಕ್ಷಿಣ ಆಫ್ರಿಕಾ, ಈಗ ಅಷ್ಟೇ ಹೀನಾಯ ಸೋಲು ಕಂಡಿದೆ. ಸರಣಿಯ ನಿರ್ಣಾಯಕ ಮೂರನೇ ಪಂದ್ಯ ಮಾರ್ಚ್ 20 ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !