ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕೇವಲ ಹೇಳಿಕೆಗಳನ್ನು ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ಇಲಾಖೆಯಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಟೀಕಿಸಿದ ಅಶೋಕ್, “ಸಚಿವ ಪ್ರಿಯಾಂಕ್ ಖರ್ಗೆ ಅಪ್ಪ ಆರ್ಎಸ್ಎಸ್ ಕ್ಯಾಂಪ್ಗೆ ಬಂದು ಹೋದರಲ್ಲ, ಆವಾಗ ಇವರಿಗೆ ಬುದ್ಧಿ ಹೇಳೋಕೆ ಆಗಲಿಲ್ವಾ? ಇವರು ಹೇಳಿಕೆ ಕೊಡುವುದರಲ್ಲೇ ಜೀವನ ಕಳೆದಿದ್ದಾರೆ. ಇಲಾಖೆಯಲ್ಲಿ ಏನು ಕೆಲಸ ಮಾಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಇಡೀ ಕಲಬುರಗಿ ಬೆಂಕಿಯಲ್ಲಿ ಉರಿಯುತ್ತಿದೆ. ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ನೋಡಲು, ಕೇಳಲು ಯೋಗ್ಯತೆ ಇಲ್ಲ. ಆರ್ಎಸ್ಎಸ್ ಬಗ್ಗೆ ಮಾತಾಡಿದರೆ ಪ್ರಚಾರ ಆಗುತ್ತೆ, ದೇಶದಲ್ಲಿ ನಾನು ದೊಡ್ಡ ಫೇಮಸ್ ಆಗಬಹುದು ಅಂತ ಮಾತಾಡ್ತಿದ್ದಾರೆ” ಎಂದು ಖರ್ಗೆ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಸಾಮರ್ಥ್ಯದ ಕುರಿತು ಟೀಕಿಸಿದ ಆರ್. ಅಶೋಕ್, “ಕಾಂಗ್ರೆಸ್ನವರು ಏನು ಮಾಡೋಕೆ ಸಾಧ್ಯ. ಇನ್ನು ಎರಡು ವರ್ಷ ಎಲ್ಲರೂ ಓಡಿ ಹೋಗಿ ಬಿಲ ಸೇರಿಕೊಳ್ಳುತ್ತಾರೆ. ಇವತ್ತು ದೇಶದಲ್ಲಿ ಪ್ರಧಾನಿ, ರಾಜ್ಯಪಾಲರಿಂದ ಇಡಿದು ಎಲ್ಲರೂ ಬಿಜೆಪಿಯವರೇ ಇರೋದು. ಇವರು (ಕಾಂಗ್ರೆಸ್) ಯಾವುದೋ ಮೂಲೆಯಲ್ಲಿ ಬಿದ್ದಿದ್ದಾರೆ ಅಷ್ಟೇ” ಎಂದು ಲೇವಡಿ ಮಾಡಿದರು.
“ಕಾಂಗ್ರೆಸ್ಗೆ ಇಷ್ಟು ಧಮ್ ಇರಬೇಕಾದರೆ, ಪಾರ್ಲಿಮೆಂಟ್ನಲ್ಲಿ ಪ್ರಧಾನಿ, ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಎಲ್ಲರೂ ನಮ್ಮವರು, ಎಲ್ಲ ರಾಜ್ಯದಲ್ಲೂ ಬಿಜೆಪಿ ಬಹುತೇಕ ಸರ್ಕಾರ ಇರಬೇಕಾದರೆ ನಮಗೆ ಎಷ್ಟು ಧಮ್ ಇರಬೇಕು. ಇವರನ್ನು ಯಾರು ಕೇಳುತ್ತಾರೆ” ಎಂದು ಕಾಂಗ್ರೆಸ್ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.