ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದಲ್ಲಿ ಇಂದು ಮತ್ತೊಂದು ಮಹಾ ಶರಣಾಗತಿ ನಡೆದಿದ್ದು, ರಾಜ್ಯದ ಬಸ್ತಾರ್ ಪ್ರದೇಶದಲ್ಲಿ 108 ನಕ್ಸಲರು ಶಸ್ತ್ರತ್ಯಾಗ ಮಾಡಿ, ಶರಣಾಗಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿಜಯ್ ಶರ್ಮಾ, ತಲೆಗೆ ಒಟ್ಟು 3.95 ಕೋಟಿ ರೂ.ಗಳ ಬಹುಮಾನ ಹೊಂದಿದ್ದ 108 ಬಲಿಷ್ಠ ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಇವರಲ್ಲಿ ಆರು ನಕ್ಸಲ್ ಕಮಾಂಡರ್ಗಳು, ಮೂರು ಕಂಪನಿ ಪ್ಲಟೂನ್ ಸದಸ್ಯರು ಮತ್ತು 18 ಪಿಪಿಸಿಎಂಗಳು, 23 ಪ್ರದೇಶ ಸಮಿತಿ ಸದಸ್ಯರು ಮತ್ತು 56 ಇತರ ಸದಸ್ಯರು ಇದ್ದಾರೆ ಎಂದು ತಿಳಿಸಿದ್ದಾರೆ.
ಶರಣಾದವರು ಆರು ಎಕೆ-47ಗಳು, ಒಂದು ಎಕೆ-47 ಪಿಎಆರ್‌ಜಿ, 11 ಐಎನ್‌ಎಸ್‌ಎಎಸ್ ರೈಫಲ್‌ಗಳು, ಒಂದು ಕಾರ್ಬೈನ್, ಐದು ಎಸ್‌ಎಲ್‌ಆರ್ ರೈಫಲ್‌ಗಳು ಮತ್ತು ಒಂದು ಬಿಜಿಎಲ್ ಸೇರಿದಂತೆ 101 ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜಾಪುರದಲ್ಲಿ 37, ದಂತೇವಾಡದಲ್ಲಿ 30, ಸುಕ್ಮಾದಲ್ಲಿ 18, ಬಸ್ತಾರ್‌ನಲ್ಲಿ 16, ನಾರಾಯಣಪುರದಲ್ಲಿ ನಾಲ್ವರು ಮತ್ತು ಕಾಂಕೇರ್‌ನಲ್ಲಿ ಮೂವರು ಮಾವೋವಾದಿಗಳು ಪೊಲೀಸ್ ಪಡೆಗಳ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿದ್ದಾರೆ. ಜೊತೆಗೆ ಬಿಜಾಪುರದ ಇಂದ್ರಾವತಿ ನದಿಯ ಬಳಿ ಹೂತಿಟ್ಟಿದ್ದ 3 ಕೋಟಿ 60 ಲಕ್ಷ ರೂಪಾಯಿ ಮತ್ತು 1 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬಸ್ತಾರ್ ವಿಭಾಗದ ವ್ಯಾಪ್ತಿಯಲ್ಲಿ 30 ಪ್ರದೇಶ ಸಮಿತಿಗಳು, 26 ಇತರ ಸಮಿತಿ ಸದಸ್ಯರನ್ನು ಶರಣಾಗುವಂತೆ ಮಾಡಲಾಗಿದೆ. ಇನ್ನೂ, 4 ಸಮಿತಿಗಳ ಸದಸ್ಯರ ಮೇಲೆ ನಿಗಾ ಇಡಲಾಗಿದೆ. 2026 ರ ಮಾರ್ಚ್ 31ರ ವೇಳೆಗೆ ಛತ್ತೀಸ್‌ಗಢ ನಕ್ಸಲಿಸಂ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
ನಕ್ಸಲ್ ಮುಕ್ತ ರಾಜ್ಯಕ್ಕೆ 20 ದಿನ ಬಾಕಿ
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 4 ದಶಕಗಳಿಂದ ಒಂದಲ್ಲಾ ಒಂದು ಅವಘಡ ಸೃಷ್ಟಿಸುತ್ತಿದ್ದ ಮಾವೋವಾದಿ ಸಂಘಟನೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 31ರ ಗಡುವು ನಿಗದಿಪಡಿಸಿದ್ದರು. ಎಲ್ಲ ನಕ್ಸಲರನ್ನು ನಿಶ್ಯಸ್ತ್ರೀಕರಣಗೊಳಿಸಲು ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬಸ್ತಾರ್‌ನಲ್ಲಿ ವಿವಿಧ ತಂತ್ರಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.



