ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ನಲ್ಲಿ ಲಡಾಖ್ನ ಬೇಡಿಕೆಗಳ ಕುರಿತು ಮಾತುಕತೆ ಪುನರಾರಂಭಿಸಲಾಗುವುದು ಎಂದು ಗೃಹ ಸಚಿವಾಲಯ ಭರವಸೆ ನೀಡಿದ ನಂತರ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತಿತರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಸೋಮವಾರ ಅಂತ್ಯಗೊಳಿಸಿದರು.
ಜಮ್ಮು- ಕಾಶ್ಮೀರ ಮತ್ತು ಲಡಾಖ್ನ ಜಂಟಿ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಅವರು ಅಕ್ಟೋಬರ್ 6 ರಿಂದ ದೆಹಲಿಯ ಲಡಾಖ್ ಭವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಕುಳಿತಿದ್ದ ಕಾರ್ಯಕರ್ತರನ್ನು ಭೇಟಿಯಾಗಿ ಗೃಹ ಸಚಿವಾಲಯದ ಪತ್ರವನ್ನು ನೀಡಿದರು.
ಲಡಾಖ್ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಚಿವಾಲಯದ ಉನ್ನತಾಧಿಕಾರ ಸಮಿತಿಯು ಮುಂದಿನ ಸಭೆಯನ್ನು ಡಿಸೆಂಬರ್ 3 ರಂದು ನಡೆಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ನಿರ್ಧರಿಸಿದರು.
ಲಡಾಖ್ ನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಲೇಹ್ ನಿಂದ ದೆಹಲಿಗೆ ಪಾದಯಾತ್ರೆ ನಡೆಸಿದ್ದ ಸೋನಮ್ ವಾಂಗ್ಚುಕ್, ಲಡಾಖ್ ಭವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.