ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ಬಸ್ ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹಸಿರು ನಿಶಾನೆ ತೋರಿದರು.
ಈ ಮೂಲಕ ಸಾರ್ವಜನಿಕ ಸಾರಿಗೆ ವಲಯದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗುತ್ತಿದೆ. ಇದು ಆಮದು ಮಾಡಲಾಗುವ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸುವುದರ ಜೊತೆಗೆ ಮಾಲಿನ್ಯ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಆಯ್ದ ಮಾರ್ಗಗಳಲ್ಲಿ ಒಟ್ಟು 15 ಹಸಿರು ಹೈಡ್ರೋಜನ್ನಿಂದ ಚಾಲಿತವಾಗುವ ಬಸ್ಗಳನ್ನು ಪ್ರಾಯೋಗಿಕವಾಗಿ ಸಂಚರಿಸಲಿದ್ದು, ಇಂಡಿಯನ್ ಆಯಿಲ್ ಕಂಪನಿಯ ಪ್ರಯತ್ನಗಳ ಭಾಗವಾಗಿ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.
ಫರಿದಾಬಾದ್ನಲ್ಲಿರುವ ಇಂಡಿಯನ್ ಆಯಿಲ್ ಆರ್ ಅಂಡ್ ಡಿ ಕ್ಯಾಂಪಸ್ನಲ್ಲಿ ಹೈಡ್ರೋಜನ್ ಬಸ್ ಗಳಿಗೆ ಇಂಧನ ತುಂಬುವ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದೆ.
ಹೈಡ್ರೋಜನ್ ಇಂಧನ ಚಾಲಿತ ಬಸ್ ಗಳಿಗೆ ಸೌರ ಪಿವಿ ಪ್ಯಾನೆಲ್ಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಲಾದ ಹಸಿರು ಹೈಡ್ರೋಜನ್ ಇಂಧನವನ್ನು ತುಂಬಿಸಲಿದ್ದು, ಹೈಡ್ರೋಜನ್ ಇಂಧನವನ್ನು ಹೆಚ್ಚಿನ ಒತ್ತಡದಲ್ಲಿ ಅಂದರೆ 350 ಬಾರ್ನಲ್ಲಿ ಸಂಗ್ರಹಿಸಲಾಗುತ್ತದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ಹೈಡ್ರೋಜನ್ ಮತ್ತು ಆಮ್ಲಜನಕವು ನೀರಿಗೆ ಪರಿಣಾಮಕಾರಿಯಾಗಿ ಪರಿವರ್ತಿಸುವ ಮೂಲಕ ಅದು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ.
ಹೈಡ್ರೋಜನ್ ಇಂಧನ ಚಾಲಿತ ಬಸ್ ಗಳು ಬ್ಯಾಟರಿ ಚಾಲಿತ ಬಸ್ ಸಂಚಾರಕ್ಕೆ ಹೋಲಿಸಿದರೆ ದೀರ್ಘ ಶ್ರೇಣಿ ಮತ್ತು ಕಡಿಮೆ ಇಂಧನದಂತಹ ಪ್ರಯೋಜನಗಳನ್ನು ಹೊಂದಿರಲಿದ್ದು, ಈ ಮೂಲಕ ಇಂಧನ ಚಾಲಿತ ವಾಹನಗಳ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸಲು ನೆರವಾಗಲಿದೆ.
ಸದ್ಯಕ್ಕೆ ಒಟ್ಟು 15 ಹಸಿರು ಹೈಡ್ರೋಜನ್ ಬಸ್ ಗಳ ಮೂಲಕ ಬರೋಬ್ಬರಿ 3 ಲಕ್ಷ ಕಿ.ಮೀ ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸುವ ಯೋಜನೆ ಹೊಂದಿದ್ದು, ಹೊಸ ಪ್ರಯೋಗದಲ್ಲಿ ಸಂಗ್ರಹಿಸಲಾದ ಡೇಟಾ ಆಧರಿಸಿ ಮುಂಬರುವ ದಿನಗಳಲ್ಲಿ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರದ ಮಾರ್ಗಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.