ಮೈಶುಗರ್ಸ್’ನಲ್ಲಿ 140 ಕೋಟಿ ರೂ. ಅನುದಾನ ದುರ್ಬಳಕೆ : ರಾಜ್ಯ ಸರ್ಕಾರದಿಂದ ತನಿಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆಂದು ಬಿಡುಗಡೆ ಮಾಡಿದ್ದ 140 ಕೋಟಿ ರೂ ಅನುದಾನ ದುರ್ಬಳಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ಆಡಳಿತ ನಡೆಸಿದ್ದ ಹಲವು ಪಕ್ಷಗಳ ಸರ್ಕಾರಗಳು ಮೈಶುಗರ್ಸ್‌ ಕಾರ್ಖಾನೆಗೆ ಈವರೆಗೆ ರೂ.650 ಕೋಟಿಗೂ ಹೆಚ್ಚು ಅನುದಾನ ನೀಡಿವೆ. ಆ ವೆಚ್ಚದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಹುದಿತ್ತು. ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದರೂ, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಂಡಿಲ್ಲ. ಹೀಗಾಗಿ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

ಕಾಂಗ್ರೆಸ್‌ ಸರ್ಕಾರ ಬಂದ ನಂತರ ಕಾರ್ಖಾನೆ ಅಭಿವೃದ್ಧಿಗೆ ಕೈಗೊಂಡ ವಿವಿಧ ಕ್ರಮಗಳಿಂದಾಗಿ ಪ್ರತಿಶತ 3.5ರಷ್ಟಿದ್ದ ಸಕ್ಕರೆ ಇಳುವರಿ ಪ್ರಮಾಣ ಈಗ ಶೇ.8ಕ್ಕೆ ಏರಿಕೆಯಾಗಿದೆ. ಸಹ ವಿದ್ಯುತ್‌ ಘಟಕವನ್ನು ಸಹ ಆರಂಭಿಸಲಾಗಿದೆ. 2023-24ನೇ ಸಾಲಿನಲ್ಲಿ 12.21 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದ್ದು, ಈ ಪೈಕಿ 7.28 ಲಕ್ಷ ಯೂನಿಟ್‌ಗಳನ್ನು ಕಾರ್ಖಾನೆಗೆ ಬಳಸಿಕೊಳ್ಳಲಾಗಿದೆ. 4.93 ಲಕ್ಷ ಯೂನಿಟ್‌ ವಿದ್ಯುತ್‌ ಅನ್ನು ಚೆಸ್ಕಾಂಗೆ ಮಾರಾಟ ಮಾಡಿ 29.14 ಲಕ್ಷ ರು. ಆದಾಯ ಗಳಿಸಲಾಗಿದೆ.

2024-25ನೇ ಸಾಲಿನಲ್ಲಿ 1,57,30,000 ಯೂನಿಟ್‌ ಉತ್ಪಾದಿಸಲಾಗಿದೆ. ಈ ಪೈಕಿ 71,83,440 ಯೂನಿಟ್‌ ವಿದ್ಯುತ್‌ ಅನ್ನು ಚೆಸ್ಕಾಂಗೆ 4,33,87,977 ರು.ಗೆ ಮಾರಾಟ ಮಾಡಲಾಗಿದೆ. ಈ ಮೊತ್ತವನ್ನು ಚೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್‌ ಬಿಲ್‌ ಬಾಕಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!