ಮೈಸೂರು ಜಿಲ್ಲೆಯ 1531 ಸರಕಾರಿ ಶಾಲೆಗಳಿಗೆ ಕ್ಯಾಪ್ಸ್ ಫೌಂಡೇಷನ್ ನಿಂದ ರೂ.1 ಕೋಟಿಯ ಸವಲತ್ತು ಕೊಡುಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿ. ಎ. ಚಂದ್ರಶೇಖರ ಶೆಟ್ಟಿ ಮುಂಡ್ಕೂರು ನೇತೃತ್ವದ ಕ್ಯಾಪ್ಸ್ ಫೌಂಡೇಷನ್ ವತಿಯಿಂದ ಕಲಾಂ ಫಾರ್ ಕಲಾಂ ಯೋಜನೆಯಡಿ ಮೈಸೂರು ಜಿಲ್ಲೆಗಳ 1000 ಅಂಗನವಾಡಿ ಹಾಗೂ 531 ಸರಕಾರಿ ಪ್ರಾಥಮಿಕ ಹಾಗೂ ಹೈಸ್ಕೂಲುಗಳಿಗೆ ಆಟಿಕೆಗಳು ಪುಸ್ತಕಗಳು ಇತ್ಯಾದಿ ಪಠ್ಯಪೂರಕ ವಸ್ತುಗಳನ್ನು ಹಾಗೂ ಐದು ಸಾವಿರ ವಿದ್ಯಾರ್ಥಿಗಳಿಗೆ ಸ್ಟೀಲ್ ಬಾಟಲಿ. ಟೀಶರ್ಟ್ ಬಟ್ಟೆ ಚೀಲ ನೀಡುವ ಯೋಜನೆ ನಂಜನಗೂಡು ಸರಕಾರಿ ಪದವೀಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು. ಇದಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಗೆ ಕಟೀಲು ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ ಕಾಂಚನ್. ನಿವೃತ್ತ ಉಪನ್ಯಾಸಕ ಜಗದೀಶ್ಚಂದ್ರ ಕೆ. ಕೆ. ಕ್ಯಾಪ್ಸ್ ಫೌಂಡೇಷನ್ ನ ಅಮನ್ ಶೆಟ್ಟಿ, ಪೂರ್ಣಿಮಾ ಚಂದ್ರಶೇಖರ್, ಚಿನ್ಮಯಿ ಶೆಟ್ಟಿ, ಸಂತೋಷ್. ಮೈಸೂರು ಜಿಲ್ಲಾ ಎಚ್ ಎಂ. ಸಂಘದ ಸೋಮೇಗೌಡ ಮುಂತಾದವರಿದ್ದರು.
ಅಂಗನವಾಡಿಗಳಿಗೆ ಮರದ ಕುದುರೆ ಇತ್ಯಾದಿ ಆಟಿಕೆಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕೇರಂ ಚೆಸ್ ಕ್ರಿಕೆಟ್ ಪೂಟ್ ಬಾಲ್ ವಾಲಿಬಾಲ್ ಡಿಸ್ಕಸ್ ಥ್ರೋ ಸ್ಕಿಪ್ಪಿಂಗ್ ವಸ್ತುಗಳು ಪುಸ್ತಕಗಳು ಇತ್ಯಾದಿ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು. ಕ್ಯಾಪ್ಸ್ ಪೌಂಡೇಷನ್ ನ ನೂರಕ್ಕೂ ಹೆಚ್ಚು ಸಿಎ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಈ ವಿತರಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಕಟೀಲು ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ ಕಾಂಚನ್ ಮಾತನಾಡಿ, ಕ್ಯಾಪ್ಸ್ ಫೌಂಡೇಷನ್ ಈಗಾಗಲೇ ನೂರಾರು ಸರಕಾರಿ ಶಾಲೆಗಳ ಅಗತ್ಯತೆಗಳಿಗೆ ಸ್ಪಂದಿಸಿದೆ. ಸ್ವತಃ ಬಡತನದಿಂದ ಕಲಿತು ಇವತ್ತು ಎರಡು ಸಾವಿರಕ್ಕೂ ಹೆಚ್ಚು ಸಿಎಗಳನ್ನು ತಯಾರು ಮಾಡಿರುವ ಚಂದ್ರಶೇಖರ ಶೆಟ್ಟಿ ಸಮಾಜ ಸೇವೆಯಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ಚಾಚಿರುವುದು ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವುದು ಅಭಿನಂದನೀಯ ಎಂದರು.
ಈಗಾಗಲೇ ಶೃಂಗೇರಿ ತಾಲೂಕಿನ ಶಾಲೆಗಳಿಗೆ ರೂ. 25 ಲಕ್ಷ ವೆಚ್ಚದಲ್ಲಿ ಶಿಕ್ಷಣ ಪೂರಕ ವಸ್ತುಗಳನ್ನು ವಿತರಿಸಲಾಗಿದ್ದು, ರಾಮಕುಂಜ ಕಟೀಲು ಹಾಗೂ ಕೋಟ ವಿದ್ಯಾಲಯಗಳಲ್ಲಿ ತಲಾ ರೂ. 25 ಲಕ್ಷ ವೆಚ್ಚದಲ್ಲಿ ಸಯನ್ಸ್ ಪಾರ್ಕ್ ನಿರ್ಮಿಸಲಾಗಿದೆ. ಕೋವಿಡ್ ಸಮಯದಲ್ಲಿ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಪರಿಸರವನ್ನು ಉಳಿಸುವ ದೃಷ್ಟಿಯಿಂದ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕೆನ್ನುವುದ್ಕಾಗಿ ಪ್ಲಾಸ್ಟಿಕ್ ಬಾಟಲಿ ಬದಲಿಗೆ ಸ್ಟೀಲಿನ ಬಾಟಲಿ ಬಳಸಿ ಎಂದು ನೀಡುತ್ತಿದ್ದೇವೆ. ಈಗಾಗಲೆ ಸಹಸ್ರಾರು ಮಂದಿಗೆ ವಿತರಿಸಿದ್ದೇವೆ ಎಂದು ಚಂದ್ರಶೇಖರ್ ಶೆಟ್ಟಿ ತಿಳಿಸಿದರು. ನಂಜಜಗೂಡಿನ ಈ ಯೋಜನೆಗಾಗಿ ಮೈಸೂರಿನಲ್ಲೇ ಬಾಡಿಗೆ ಮನ ಮಾಡಿಕೊಂಡು ಒಂದು ತಿಂಗಳಿನಿಂದ ಕೆಲಸ ಮಾಡಿದ್ದೇವೆ ಎಂದು ಅವರು ತಮ್ಮ ಪ್ರಯತ್ನದ ಬಗ್ಗೆ ಹೇಳಿದರು.

ಜಿಲ್ಲೆಯಲ್ಲೇ ಮೊದಲನೆಯದ್ದು
ನಮ್ಮ ಅಂಗನವಾಡಿಗೆ ಕೊಟ್ಟಿರುವ ಆಟಿಕೆಗಳು ನಿಜಕ್ಕೂ ಖುಷಿ ಕೊಟ್ಟಿವೆ. ಇಷ್ಟು ದೊಡ್ಡ ಮಟ್ಟದಲ್ಲಿ ಶಾಲೆಗಳಿಗೆ ನಡೆದಿರುವ ಸೇವಾ ಯೋಜನೆ ನಮ್ಮ ಜಿಲ್ಲೆಯಲ್ಲೇ ಮೊದಲನೆಯದ್ದು ಎಂದು ಒಕ್ಕೋಡಿಗ್ರಾಮದ ಅಂಗನವಾಡಿ ಕಾರ್ಯಕರ್ತೆ ಲಲಿತಾ ಹೇಳಿದರು.

ಗೊಂದಲ ಮೂಡಿಸಿದ ‘ರದ್ದು’ ಆದೇಶ
ನಂಜನಗೂಡು 20ನೇ ವಾರ್ಡ್ ಉಪಚುನಾವಣೆಯ ಕಾರಣ ಶುಕ್ರವಾರ ರಾತ್ರಿ 11 ಗಂಟೆಗೆ ತಹಶೀಲ್ದಾರ್ ಕಾರ್ಯಕ್ರಮವನ್ನು ರದ್ದುಪಡಿಸಲು ತಿಳಿಸಿದರು. ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ ಜಿಲ್ಲಾಧಿಕಾರಿ ಹೀಗೆ ಎಲ್ಲರ ಅನುಮತಿಯನ್ನು ಪಡೆದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಐದು ಸಾವಿರ ಮಂದಿಗೆ ಊಟದ ವ್ಯವಸ್ಥೆ ದೊಡ್ಡ ಪೆಂಡಾಲ್ ಇತ್ಯಾದಿ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳಿರುವಾಗ ಕಾರ್ಯಕ್ರಮ ರದ್ದು ಪಡಿಸಲು ಅಥವಾ ಮುಂದೂಡಲು ಅಥವಾ ಸ್ಥಳವನ್ನು ಬದಲಾಯಿಸಲು ಸೂಚನೆ ಬಂದಾಗ ಒಂದು ಕೋಟಿ ರೂ. ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡಲು ದಿನಗಟ್ಟಲೆ ಸಿದ್ದತೆ ಮಾಡಿದ್ದ ಸಂಘಟಕರಿಗೆ ಗೊಂದಲವಾಗಿತ್ತು. ಕೊನೆಗೆ ಸಭಾ ಕಾರ್ಯಕ್ರಮವನ್ನು ರದ್ದುಪಡಿಸಿ ವಿತರಣೆಯನ್ನು ಮಾತ್ರ ಮಾಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ ಹಿನ್ನಲೆಯಲ್ಲಿ ಸವಲತ್ತುಗಳ ವಿತರಣೆಯನ್ನು ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಮಾಡಲಾಯಿತು. ಈ ಮಧ್ಯೆ ಜಿಲ್ಲೆಯ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ರದ್ದಾಗಿದೆ ಎಂದು ವಾಟ್ಸಪ್ ಮೆಸೇಜು ಮಾಡಿದ್ದೂ ಗೊಂದಲಕ್ಕೆ ಕಾರಣವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!