ಐಪಿಎಲ್ ಇತಿಹಾಸದಲ್ಲಿ ಆಸೀಸ್ ನಾಯಕನ ದಾಖಲೆ: ಬರೋಬ್ಬರಿ 20.50 ಕೋಟಿಗೆ ಸೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಅಬ್ಬರ ಮತ್ತೆ ಶುರುವಾಗಿದ್ದು, ಇಂದು ದುಬೈನಲ್ಲಿ ಆಟಗಾರರನ್ನು ಹರಾಜು ಮಾಡಲಾಗುತ್ತಿದೆ.

ಈ ಮಿನಿ ಹರಾಜಿನಲ್ಲಿ 332 ಆಟಗಾರರಿದ್ದು, 216 ಭಾರತೀಯರು ಮತ್ತು 116 ವಿದೇಶಿ ಆಟಗಾರರಿದ್ದಾರೆ.

ಈ ಬಾರಿ ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಐಪಿಎಲ್‌ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ದಾಖಲೆಯ ಮೊತ್ತಕ್ಕೆ ಮಾರಾಟವಾದ ಆಟಗಾರ ಎನಿಸಿದ್ದಾರೆ.

2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ಯಾಟ್‌ ಕಮ್ಮಿನ್ಸ್‌ರನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದೊಡ್ಡ ರೇಸ್‌ನಲ್ಲಿದ್ದವು. ಎರಡೂ ತಂಡಗಳು ಬಿಡ್‌ಅನ್ನು 10 ಕೋಟಿಗೂ ಮೇಲೆ ಏರಿಸಿದ್ದವು. ಅದಾದ ಕೆಲವೇ ಹೊತ್ತಿನಲ್ಲಿ ಕಮ್ಮಿನ್ಸ್‌ ಅವರ ಬೆಲೆ 20 ಕೋಟಿಯ ಗಡಿ ಮುಟ್ಟಿದಾಗ ಐಪಿಎಲ್‌ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾಗುವ ಆಟಗಾರ ಎನಿಸಿದರು. ಕೊನೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದಾಖಲೆಯ 20.50 ಕೋಟಿ ರೂಪಾಯಿಗೆ ಅವರನ್ನು ತಂಡಕ್ಕೆ ಖರೀದಿ ಮಾಡಿತು.

ಟ್ರಾವಿಸ್‌ ಹೆಡ್‌ಗೆ ಜಾಕ್‌ಪಾಟ್‌
2024ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ಭಾರತದ ಇಡೀ ಕನಸುಗಳನ್ನು ನುಚ್ಚುಮೂರು ಮಾಡಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ನಿರೀಕ್ಷೆಯಂತೆಯೇ ದೊಡ್ಡ ಮಟ್ಟದ ಜಾಕ್‌ಪಾಟ್‌ ಗಳಿಸಿದರು. 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಟ್ರಾವಿಸ್‌ ಹೆಡ್‌ರನ್ನು ಖರೀದಿ ಮಾಡಲು ಮೊದಲಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಮುಂದೆ ಬಂದಿತು. ಟ್ರಾವಿಸ್‌ ಹೆಡ್‌ರನ್ನು ಕೊನೆಗೆ 6.80 ಕೋಟಿ ರೂಪಾಯಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಖರೀದಿ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!