ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಕೆಲ ದೇಶಗಳಲ್ಲಿ ಹಾಲ್ವು ಜನರು ಸಾವನ್ನಪ್ಪಿದ್ದು, ಇದಕ್ಕೆಭಾರತದ ಕೆಮ್ಮಿನ ಸಿರಪ್ಗಳು (Couph Syrups) ಕಾರಣ ಎಂಬ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಎಚ್ಚೆತ್ತುಕೊಂಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನಸುಖ್ ಮಾಂಡವೀಯ ಮಂಗಳವಾರ, ಎಂಎಸ್ಎಂಇ ವಲಯದ ಫಾರ್ಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ಔಷಧ ಉತ್ಪಾದನೆಯಲ್ಲಿ ಗುಣಮಟ್ಟ ಖಾತ್ರಿಪಡಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ಫಾರ್ಮಾ ಕಂಪನಿಗಳು ಸ್ವಯಂ ಕಟ್ಟಳೆ ಮೂಲಕ ಉತ್ತಮ ಉತ್ಪಾದನಾ ಪ್ರಕ್ರಿಯೆ (ಜಿಎಂಪಿ) ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಫಾರ್ಮಾ ವಲಯದಲ್ಲಿ ನಮ್ಮ ಜಾಗತಿಕ ಸ್ಥಾನಮಾನವು ನಮ್ಮ ಉತ್ಪನ್ನಗಳ ಗುಣಮಟ್ಟದ ಮೇಲೆ ಸಿದ್ಧವಾಗುತ್ತದೆ. ಔಷಧದ ಗುಣಮಟ್ಟ ಮತ್ತು ಮೌಲ್ಯದ ವಿಚಾರದಲ್ಲಿ ಭಾರತದ ಸ್ಥಾನಮಾನ ಗಟ್ಟಿಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ನಾನು ತೆಗೆದುಕೊಳ್ಳಬೇಕು. ಆದ್ದರಿಂದ ಸೆಲ್ಫ್ ರೆಗ್ಯುಲೇಶನ್ ಬಹಳ ಮುಖ್ಯವಾಗುತ್ತದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಅದೇ ರೀತಿ ಈವರೆಗೆ 137 ಸಂಸ್ಥೆಗಳನ್ನು ತಪಾಸಿಸಲಾಗಿದೆ. ಇದರಲ್ಲಿ 105 ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ 105 ಸಂಸ್ಥೆಗಳ ಪೈಕಿ 31ರಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. 50 ಸಂಸ್ಥೆಗಳಿಗೆ ಪರವಾನಿಗೆ ರದ್ದು ಮಾಡಲಾಗಿದೆ. 73 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ. 21 ಸಂಸ್ಥೆಗಳಿಗೆ ಎಚ್ಚರಿಕೆಯ ಪತ್ರ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತ ವಿಶ್ವದ ಫಾರ್ಮಸಿಯಾಗಬೇಕೆನ್ನುವ (World Pharmacy) ಅಭಿಲಾಷೆಗೆ ಈ ರೀತಿಯ ಘಟನೆಗಳು ಘಾಸಿ ತರುತ್ತಿದ್ದು, ಅದನ್ನು ಸರಿಮಾಡಲು ಸರ್ಕಾರ ಗಂಭೀರವಾಗಿದೆ. ಕಳಪೆ ಔಷಧ ತಯಾರಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಗುಣಮಟ್ಟದ ಔಷಧ ತಯಾರಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಫಾರ್ಮಾ ಕ್ಷೇತ್ರದ ಪ್ರಾಧಿಕಾರಗಳಿಂದ (Pharma Regulatory Authorities) ವ್ಯಾಪಕ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನ ಬಂದ ಫಾರ್ಮಾ ಘಟಕಗಳನ್ನು ಆಯ್ದುಕೊಂಡು ತಪಾಸಣೆ ಕಾರ್ಯ ನಡೆಸಲಾಗುತ್ತಿದೆ ಎಂದರು.