ಹೊಸದಿಗಂತ ವರದಿ, ಕನಕಗಿರಿ:
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜು ಅವರ ಜಾತಿವಾರು ಸಮೀಕ್ಷೆ ವರದಿಯಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವರದಿ ಇನ್ನು ಸ್ವೀಕಾರವಾಗಿಲ್ಲ. ವರದಿ ಸ್ವೀಕರಿಸಿದ ಬಳಿಕ ಅದರ ಸಾಧಕ-ಬಾಧಕಗಳ ಚರ್ಚೆ, ಪರಿಶೀಲನೆ ನಡೆಸಲಾಗುವುದು. ವರದಿ ಸ್ವೀಕಾರಗೊಳ್ಳದೆ, ಅದರಲ್ಲಿನ ಅಂಶ ಹೇಗೆ ತಿಳಿಯಲಿದೆ ಎಂದರು.
ಮುಖ್ಯಮಂತ್ರಿಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕತೆ ತಿಳಿಯುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಿದ್ದಾರೆ. ವರದಿಯಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ. ವಿರೋಧ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ತಪ್ಪು ಗ್ರಹಿಕೆಯಿಂದ ಮಾತನಾಡುವುದು ಬೇಡ. ವರದಿಯನ್ನು ನವೆಂಬರ್‌ನಲ್ಲಿ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷರು ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದಾರೆ. ವರದಿ ಮೊದಲು ಸಲ್ಲಿಕೆಯಾಗಲಿ ಎಂದರು.
ಅಕಾರಿಯ ವರ್ತನೆ ಬಗ್ಗೆ ಶಾಸಕ ಜೆ.ಟಿ.ಪಾಟೀಲ್ ಅವರು ಸ್ಪೀಕರ್ ಅವರಿಗೆ ಪತ್ರ ಬರೆದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಮ್ಮ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಯಾರೇ ತಪ್ಪು ಮಾಡಿದರೂ ಮುಖ್ಯಮಂತ್ರಿಗಳ ಗಮನಕ್ಕೆ ತಂದರೆ ತಪ್ಪೇನು.
ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಛೇಡಿಸಿದರು. ಶಾಸಕರು ಪತ್ರ ಬರೆದಿರುವ ವಿಷಯಕ್ಕೆ ಸಂಬಂಸಿದಂತೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಈ ಬಗ್ಗೆ ಸರಿಪಡಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.