ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ .

ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಇಂದು ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ ಕುಕ್ಕೆಬೆಡಿ ಪ್ರದರ್ಶಿತವಾಗಲಿದೆ.ಈ ದಿನ ಸಂಜೆ ಶ್ರೀ ದೇವಳದಿಂದ ನಡೆಯುವ ಕೃಷಿ ಮೇಳವು ಉದ್ಘಾಟನೆಗೊಳ್ಳಲಿದೆ.

ಪ್ರಾರ್ಥನೆ ಸೇವೆ ಇಲ್ಲ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಯಾದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪಂಚಮಿ ಹಾಗೂ ಷಷ್ಠಿಯಂದು ಶ್ರೀ ದೇವಳದಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೆ ಪಂಚಾಮೃತ ಮಹಾಭಿಷೇಕ ಸೇವೆಯು ಕೂಡಾ ಈ ದಿನಗಳಲ್ಲಿ ನಡೆಯುವುದಿಲ್ಲ.ಅಲ್ಲದೆ ಷಷ್ಠಿಯಂದು ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

ಜಾತ್ರೆ ಯಶಸ್ವಿಗೆ ಎಲ್ಲ ಸಿದ್ಧತೆಗಳು ನಡೆದಿವೆ. ವಾಹನ ಪಾಕಿಂಗ್, ಭದ್ರತೆ, ಭಕ್ತರ ಪ್ರಯಾಣಕ್ಕೆ ಸಿದ್ಧತೆಗಳು ನಡೆದಿವೆ. ಕ್ಷೇತ್ರದಲ್ಲಿ ಬೀದಿ ಉರುಳು ಸೇವೆ , ಎಡೆಸ್ನಾನ ಸೇವೆಗಳು ನಡೆಯುತಿದ್ದು ಸೇವೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ,ವಿದ್ಯುದ್ದೀಪ, ದೀಪಾಲಂಕಾರ, ವಿಶೇಷ ಮಾಹಿತಿ ಕೇಂದ್ರ, ವಿಶೇಷ ಆರೋಗ್ಯ ಉಪಕೇಂದ್ರವನ್ನು ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ಸ್ವಚ್ಚತೆಗೆ ಆಧ್ಯತೆ ನೀಡಲಾಗಿದೆ. ಜಾತ್ರೆ ವೇಳೆ ಸಂತೆ ವ್ಯಾಪಾರ ಅಂಗಡಿಗಳು ತೆರೆದುಕೊಂಡಿವೆ.ಅಲ್ಲದೆ ಮನೋರಂಜನಾ ಸಾಧನಗಳು ಆಗಮಿಸಿದ್ದು ಜಾತ್ರೋತ್ಸವಕ್ಕೆ ವಿಶೇಷ ಕಳೆ ನೀಡುತ್ತಲಿದೆ.ಭದ್ರತಾ ದೃಷ್ಠಿಯಿಂದ ಹೆಚ್ಚುವರಿ ಪೋಲೀಸರನ್ನು ಹಾಗೂ ಗೃಹ ರಕ್ಷಕ ದಳವನ್ನು ನಿಯೋಜನೆ ಮಾಡಲಾಗಿದೆ. ಬೋಜನ ಪ್ರಸಾದ ವಿತರಣೆಗೆ, ಲಗೇಜ್ ಕೊಠಡಿಗೆ, ಗೋಪುರದ ಬಳಿ ಒತ್ತಡ ನಿವಾರಣೆಗೆ, ಮಾಹಿತಿ ಒದಗಿಸಲು, ಬಲಿವಾಡ ಸೇವೆ ಸ್ವೀಕರಿಸಲು ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!