ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಲಿನ ಆಘಾತದಿಂದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣನವರನ್ನು ಕಾಂಗ್ರೆಸ್ ಸರ್ಕಾರವು ಬೆಂಕಿಗೆ ಹಾಕಲು ಹೊರಟಿದೆ ಎಂದು ಆರೋಪಿಸಿದ್ದಾರೆ.
‘ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ’, ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೊಸ ಹೇಳಿಕೆ. ಇದೇ ಕೆಂಪಣ್ಣನವರ 40 ಪರ್ಸೆಂಟ್ ಆರೋಪವನ್ನೇ ಅಸ್ತ್ರ ಮಾಡಿಕೊಂಡು, ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ‘ಸಿದ್ದಕಲೆ’ ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಕರ್ನಾಟಕ ಮುಖ್ಯಮಂತ್ರಿ ಕಚೇರಿಯ ಐದಾರು ಟಿಪ್ಪಣಿಗಳು ‘ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ’ ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತ ಕಥೆ ಏನು? 136 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ ‘ಅತಿ ಉಬ್ಬರ’ವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.