ಗುಜರಾತ್‌ನ ಅಗ್ನಿ ದುರಂತದಲ್ಲಿ ಏಳು ಕಾರ್ಮಿಕರು ಸಾವು: ಮೃತರ ಕುಟುಂಬಗಳಿಗೆ 50 ಲಕ್ಷ ಪರಿಹಾರ ಘೋಷಿಸಿದ ಕಂಪನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಸೂರತ್ ನಗರದ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿ, ಏಳು ಜನ ಕಾರ್ಮಿಕರುಮೃತಪಟ್ಟಿದ್ದು, ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.

ಇತ್ತ ಮೃತರ ಕುಟುಂಬಗಳಿಗೆ ಕಂಪನಿಯು ತಲಾ 50 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ಈಥರ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದ ದಹನಕಾರಿ ರಾಸಾಯನಿಕಗಳ ಸೋರಿಕೆಯಿಂದಾಗಿ ಟ್ಯಾಂಕ್‌ನಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ ಸುಮಾರು 27 ಕಾರ್ಮಿಕರು ಕಾರ್ಖಾನೆಯಲ್ಲಿ ಸಿಲುಕಿದ್ದರು. ಈ ಪೈಕಿ ಏಳು ಕಾರ್ಮಿಕರ ಮೃತದೇಹಗಳು ಗುರುವಾರ ಮುಂಜಾನೆ ಪತ್ತೆಯಾಗಿವೆ. ಇತರರು ಗಾಯಗೊಂಡಿದ್ದು, ಸದ್ಯ ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮೃತರನ್ನು ದಿವ್ಯೇಶ್ ಪಟೇಲ್, ಸಂತೋಷ್ ವಿಶ್ವಕರ್ಮ, ಸನತ್​ ಕುಮಾರ್ ಮಿಶ್ರಾ, ಧರ್ಮೇಂದ್ರ ಕುಮಾರ್, ಗಣೇಶ್ ಪ್ರಸಾದ್, ಸುನೀಲ್​ ಕುಮಾರ್​ ಮತ್ತು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಏಳು ಜನರ ಪೈಕಿ ಒಬ್ಬರು ಕಂಪನಿಯ ಉದ್ಯೋಗಿಯಾಗಿದ್ದು, ಆರು ಮಂದಿ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಸೂರತ್ ಜಿಲ್ಲಾಧಿಕಾರಿ ಆಯುಷ್ ಓಕ್ ತಿಳಿಸಿದ್ದಾರೆ.

ಸೂರತ್‌ನ ಪ್ರಸಿದ್ಧ ಉದ್ಯಮಿಯಾದ ಅಶ್ವಿನ್ ದೇಸಾಯಿ ಅವರು ಈ ಬೆಂಕಿ ದುರಂತ ಸಂಭವಿಸಿದ ಈಥರ್ ಇಂಡಸ್ಟ್ರೀಸ್​ನ ನಿರ್ದೇಶಕರಾಗಿದ್ದಾರೆ. ಪ್ರಸಿದ್ಧ ಫೋರ್ಬ್ಸ್ ಪಟ್ಟಿಯಲ್ಲೂ ಅಶ್ವಿನ್ ದೇಸಾಯಿ ಪ್ರಕಟವಾಗಿತ್ತು. ಈ ಘಟನೆಯ ನಂತರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಕುಸಿದಿವೆ ಎಂದು ವರದಿಯಾಗಿದೆ.

ಅಗ್ನಿ ದುರಂತದಲ್ಲಿ ಮೃತರ ಕುಟುಂಬಗಳು ಹಾಗೂ ಗಾಯಾಳುಗಳಿಗೆ ಕಂಪನಿ ಆರ್ಥಿಕ ನೆರವು ಘೋಷಣೆ ಮಾಡಿದೆ. ಮೃತರ ಕುಟುಂಬಗಳಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಗಾಯಾಳುಗಳಿಗೆ 25 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಅಲ್ಲದೇ, ಮೃತರ ಕುಟುಂಬದ ಜವಾಬ್ದಾರಿಯನ್ನೂ ಕಂಪನಿ ವಹಿಸಿಕೊಳ್ಳಲಿದ್ದು, ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!