ಹೊಸದಿಗಂತ ಡಿಜಿಟಲ್ ಡೆಸ್ಕ್:
ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಹುವಾ ಮೊಯಿತ್ರಾ (Trinamool Congress Lok sabha MP Mahua Moitra) ಅವರಿಗೆ ದಿಲ್ಲಿ ಹೈಕೋರ್ಟ್‌ನಲ್ಲೂ (Delhi High court) ಹಿನ್ನಡೆಯಾಗಿದೆ. ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.
ಲೋಕಸಭೆಯಿಂದ ಉಚ್ಛಾಟಿತರಾದ ಮಹುವಾ ಮೊಯಿತ್ರಾ ಅವರ ಸರ್ಕಾರಿ ವಸತಿಯನ್ನು ರದ್ದುಗೊಳಿಸಲಾಗಿತ್ತು. 2024ರ ಜನವರಿ 7ರೊಳಗೆ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹುವಾ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುವವರೆಗೆ ಮೊಯಿತ್ರಾ ಅವರ ಈ ಅರ್ಜಿಯ ಕುರಿತು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಡಿಸೆಂಬರ್ 11ರಂದು ವಸತಿ ನಿರ್ದೇಶನಾಲಯ ನಿವಾಸದ ತೆರವು ಕುರಿತು ಆದೇಶ ನೀಡಿದೆ. ಇದನ್ನು ರದ್ದುಗೊಳಿಸಬೇಕು ಅಥವಾ 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ಟಿಎಂಸಿ ನಾಯಕಿಯ ಅಧಿಕೃತ ನಿವಾಸವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮೊಯಿತ್ರಾ ಅವರ ಅರ್ಜಿಯು ಕೇಳಿತ್ತು.
ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಹಾಗೂ ಉಡುಗೊರೆಗಳನ್ನು ಸ್ವೀಕರಿಸಿ, ಸಂಸತ್ತಿನ ಸಂಸದರ ಬಳಕೆಯ ವೆಬ್‌ಸೈಟ್‌ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಮೊಯಿತ್ರಾ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ ಮತ್ತು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಹೊರಹಾಕಲಾಗಿದೆ.