ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೀಪರಾಷ್ಟ್ರ ಶ್ರೀಲಂಕಾ ಪುನಶ್ಚೇತನ ಕಾಣಲು ಮಿತ್ರರಾಷ್ಟ್ರ ಮತ್ತು ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಭಾರತ, ಚೀನಾ, ಜಪಾನ್ ಸೇರಿದಂತೆ 6 ರಾಷ್ಟ್ರಗಳಿಗೆ ‘ಉಚಿತ ಪ್ರವಾಸಿ ವೀಸಾ’ ಘೋಷಿಸಿದೆ.
ಭಾರತದ ಜತೆಗೆ ಆರು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಮಂಗಳವಾರ ತಿಳಿಸಿದರು.
ಪ್ರಾಯೋಗಿಕ ಯೋಜನೆಯಾಗಿ ಮಾರ್ಚ್ 31, 2024 ರವರೆಗೆ ಜಾರಿಗೆ ತರಲಾಗುವುದು. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ನ ಪ್ರಯಾಣಿಕರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ದೇಶಕ್ಕೆ ಉಚಿತ ಪ್ರವೇಶವನ್ನು ನೀಡಲು ಸರ್ಕಾರ ಅನುಮತಿ ನೀಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಈ ದೇಶಗಳಿಂದ ಲಂಕಾಗೆ ಬರುವ ಪ್ರವಾಸಿಗರು ಯಾವುದೇ ಶುಲ್ಕವಿಲ್ಲದೆ ಪ್ರವಾಸಿ ವೀಸಾಗಳನ್ನು ಪಡೆಯಬಹುದು. ಭಾರತವು ದ್ವೀಪರಾಷ್ಟ್ರದ ಪ್ರಮುಖ ಪ್ರವಾಸಿ ರಾಷ್ಟವಾಗಿದೆ. ಆದ್ಯತೆಯ ಪ್ರವಾಸೋದ್ಯಮ ಮಾರುಕಟ್ಟೆ ಕೂಡ ಹೌದು ಎಂದು ಹೇಳಿದೆ.
ದ್ವೀಪರಾಷ್ಟ್ರ ಶ್ರೀಲಂಕಾಗೆ ಭೇಟಿ ನೀಡಿದವರ ಪೈಕಿ ಭಾರತದ ಪ್ರವಾಸಿಗರೇ ಹೆಚ್ಚಿದ್ದಾರೆ. ಸೆಪ್ಟೆಂಬರ್ ಅಂಕಿಅಂಶಗಳ ಪ್ರಕಾರ, ಭಾರತದಿಂದ ಶೇ.26 ರಷ್ಟು ಅಂದರೆ 30 ಸಾವಿರಕ್ಕೂ ಅಧಿಕ ಜನರು ಅಲ್ಲಿಗೆ ಭೇಟಿ ನೀಡಿ ಅಗ್ರಸ್ಥಾನದಲ್ಲಿದ್ದಾರೆ. ಚೀನೀ ಪ್ರವಾಸಿಗರು 8 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಎರಡನೇ ಸ್ಥಾನದಲ್ಲಿದ್ದಾರೆ.