ಮಂಡ್ಯ ಕ್ಷೇತ್ರದಲ್ಲಿ ಸಹಕಾರ ಕೋರಿದ್ದೇನೆ: ಸುಮಲತಾ ಭೇಟಿ ಬಳಿಕ ಕುಮಾರಸ್ವಾಮಿ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance )ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಸಂಸದೆ ಸುಮಲತಾ (Sumalatha Ambareesh) ಅವರನ್ನ ಭೇಟಿಯಾಗಿದ್ದಾರೆ.

ಸುಮಲತಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ (HD Kumaraswamy), ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ಆಗಿದೆ. ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ. ಸುಮಲತಾ ಜೊತೆ ಬಿಜೆಪಿ ವರಿಷ್ಠರು, ಬಿಎಸ್​ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಚರ್ಚಿಸಿದ್ದಾರೆ ಎಂದು ಹೇಳಿದ್ದಾರೆ.

ಅತ್ಯಂತ ಸೌಹಾರ್ದಯುತವಾಗಿ ಭೇಟಿಯಾಗಿದ್ದೆ. ಏ. 4ರಂದು ಮಂಡ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಏ. 3ರಂದು ಸುಮಲತಾ ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಜೊತೆ ಚರ್ಚಿಸಲಿದ್ದಾರೆ. ಬಳಿಕ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಅಂಬರೀಶ್ ಅಣ್ಣನ ಮನೆ ನನಗೆ ಹೊಸದೇನಲ್ಲ. ನಾನು, ಅಂಬರೀಶ್ ಒಟ್ಟಿಗೆ ಉಂಡು ಬೆಳೆದವರು ಎಂದಿದ್ದಾರೆ.

ಎಲ್ಲ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಅದನ್ನ ನಾನು ಇಲ್ಲಿ ಹೇಳಲು ಆಗಲ್ಲ. ಯಾರು ಶತ್ರು, ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಭೇಟಿ ನಂತರ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದು, ಹೆಚ್.ಡಿ.ಕುಮಾರಸ್ವಾಮಿ ಭೇಟಿ ವೇಳೆ ಆರೋಗ್ಯಕರ ಚರ್ಚೆಯಾಗಿದೆ. ಈ ವೇಳೆ ನನ್ನ ಹಾಗೂ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿಲ್ಲ. ಹಳೆಯದನ್ನು ಮನಸಿನಲ್ಲಿಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಆದರೆ ಏ. 3ರಂದು ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿರುವ ಬಗ್ಗೆ ತಿಳಿಸಿದೆ ಎಂದರು.

ಮಂಡ್ಯದಲ್ಲಿ ನಡೆಯುವ ಸಭೆಯಲ್ಲಿ ದರ್ಶನ್, ಅಭಿಷೇಕ್ ಇರುತ್ತಾರೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸುವೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸೂಚನೆಯಂತೆ ಮುನ್ನಡೆಯುವೆ. ಏ.3ರಂದು ಮಂಡ್ಯದಲ್ಲೇ ನನ್ನ ನಿರ್ಧಾರ ಪ್ರಕಟಿಸುವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!