ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿಯ ಐತಿಹಾಸಿಕ ವಿವಾದದ ಬಗ್ಗೆ ತೀರ್ಪು ಪ್ರಕಟಿಸುವ ಮೊದಲು ಪರಿಹಾರಕ್ಕಾಗಿ ದೇವರಲ್ಲಿ ಕೋರಿದ್ದೇನೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಂಬಿಕೆಯ ಮಹತ್ವವನ್ನು ಒತ್ತಿ ಹೇಳಿದರು.
ʼಕೆಲವೊಂದು ಪ್ರಕರಣಗಳಿಗೆ ಬೇಗ ಪರಿಹಾರ ಸಿಗುವುದಿಲ್ಲ. ಅಂತಹದ್ದೇ ಒಂದು ಪ್ರಕರಣ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ. ಆಗ ನಾನು ದೇವರ ಮುಂದೆ ಕುಳಿತು ಪರಿಹಾರವನ್ನು ತೋರುವಂತೆ ಪ್ರಾರ್ಥಿಸಿದ್ದೆ ಎಂದು ಅವರು ತಿಳಿಸಿದರು.
‘ನನ್ನನ್ನು ನಂಬಿ. ನಿಮಗೆ ನಂಬಿಕೆ ಇದ್ದರೆ, ದೇವರು ಯಾವಾಗಲೂ ಒಂದು ಮಾರ್ಗವನ್ನು ತೋರಿಸುತ್ತಾನೆ’ ಎಂದು ಹೇಳಿದರು.
ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು 2019ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಪಡಿಸಿತು.
ಈ ವರ್ಷದ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ವಿಗ್ರಹಕ್ಕೆ ಪ್ರಾನ ಪ್ರತಿಷ್ಠೆ ನೆರವೇರಿತು. ಪ್ರದಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಜುಲೈಯಲ್ಲಿ ಚಂದ್ರಚೂಡ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.