ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಟಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವದ ಉದ್ಘಾಟನೆ ಹಾಗೂ ಸಹಕಾರಿಗಳ ಸಮಾವೇಶ ಪುತ್ತೂರಿನಲ್ಲಿ ಫೆ.11 ರಂದು ಮಧ್ಯಾಹ್ನ ನಡೆಯಲಿದ್ದು, ದೇಶದ ಗೃಹ ಮಂತ್ರಿ ಹಾಗೂ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಭಾಗವಹಿಸುವ ಮೂಲಕ ರೈತರು ಮತ್ತು ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಲಿದ್ದಾರೆ ಎಂದು ರಾಜ್ಯ ಇಂಧನ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.
ಮಂಗಳವಾರ ಸಮಾವೇಶ ನಡೆಯುವ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಂಗಣ ಪರಿಶೀಲಿಸಿ ಸಿದ್ಧತೆಯ ಕುರಿತು ಮಾಹಿತಿ ಪಡೆದ ಅವರು , ಮಾಧ್ಯಮಗಳ ಜತೆ ಮಾತನಾಡಿದರು. ಕ್ಯಾಂಪ್ಕೋದ ಜತೆಗೆ ಸೇರಿ ಜನಪ್ರತಿನಿಧಿಗಳು ಈ ದೊಡ್ಡ ಸಮಾವೇಶ ಸಂಘಟಿಸುತ್ತಿದ್ದು, ಎಲ್ಲಾ ತಯಾರಿಗಳನ್ನು ಮಾಡಲಾಗುತ್ತಿದೆ. ಸುಮಾರು 75 ಸಾವಿರದಿಂದ ರಿಂದ 1 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳಲ್ಲಿ ಪ್ರಚಾರದ ಕಾರ್ಯ ನಡೆಸಲಾಗುತ್ತಿದೆ ಎಂದರು.
ಅಡಿಕೆ ಬೆಳೆಗಾರರು ಮತ್ತು ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮಾವೇಶ ಸಂಘಟಿಸಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ರೈತರ ಪರವಾಗಿ ನಿಂತ ಸರಕಾರ ಬಿಜೆಪಿ ಸರಕಾರ. ಈ ಐತಿಹಾಸಿಕ ಸಮಾವೇಶ ಮುಂದಿನ ದಿನಗಳಲ್ಲಿ ರೈತರ ಇನ್ನಷ್ಟು ಚಟುವಟಿಕೆಗಳಿಗೆ ಶಕ್ತಿ ಹಾಗೂ ಉತ್ತೇಜನ ನೀಡಲು ಹೊಸ ಪ್ರೇರಣೆ ನೀಡಲಿದೆ ಎಂಎಂದು ಅವರು ಹೇಳಿದರು.
ಚುನಾವಣೆಗೂ ಹುರುಪು
ಸಹಜವಾಗಿ ಮುಂದಿನ ಚುನಾವಣೆಯ ದೃಷ್ಟಿಯಿಂದಲೂ ಅಮಿತ್ ಶಾ ಅವರ ಈ ಸಮಾವೇಶ ಹೊಸ ಹುರುಪನ್ನು ತುಂಬಲಿದೆ. ಗ್ರಾಮ, ಬೂತ್ ಮಟ್ಟದ ಕಾರ್ಯಕರ್ತರೂ ದೊಡ್ಡ ಪ್ರಮಾಣದಲ್ಲಿ ಸಕ್ರೀಯರಾಗಿದ್ದಾರೆ. ಅಮಿತ್ ಶಾ ಆಗಮನದ ಮುಖಾಂತರ, ಸಮಾವೇಶದ ಮುಖಾಂತರ ದ.ಕ., ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳನ್ನು ಮತ್ತೊಮ್ಮೆ ಗೆದ್ದುರೈತ ಪರವಾದ ಚಟುವಟಿಕೆಗಳನ್ನು ಮಾಡಲು ಪ್ರೇರಣೆಯಾಗಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ಬಂದರು ಹಾಗೂ ಮೀನುಗಾರಿಕೆ ಸಚಿವ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಪಾಧ್ಯಕ್ಷ ರಾಮದಾಸ್, ಕರಾವಳಿ ಅಭಿವೃದ್ಧಿ ಪಾರಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಕಾರಿ ಡಾ. ಕುಮಾರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಆಮ್ಟೆ ವಿಕ್ರಂ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಕ್ಯಾಂಪ್ಕೋ ಉಪಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.