ಹೊಸ ದಿಗಂತ ವರದಿ, ಹುಬ್ಬಳ್ಳಿ:
ರೈಲ್ವೆ ಇಲಾಖೆಯಿಂದ ಶಬರಿಮಲೆಗೆ ಹೋಗಲು ಎರಡು ವಿಶೇಷ ರೈಲು ಆರಂಭಿಸಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಹೋಗುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕಳೆದ ವರ್ಷ ಸಾಲುಮರದ ತಿಮ್ಮಕ್ಕ, ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರ ಉಮೇಶ ಅವರ ನೇತೃತ್ವದಲ್ಲಿ ರೈಲ್ವೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಅವರು ಎರಡು ವಿಶೇಷ ರೈಲು ಆರಂಭಿಸಲಾಗಿತ್ತು. ಪ್ರಸ್ತುತ ವರ್ಷವೂ ಈ ಸೌಲಭ್ಯವಿದ್ದು, ಭಕ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಾರದಲ್ಲಿ ಎರಡು ರೈಲುಗಳಿದ್ದು, ಡಿ.2ರಿಂದ 20 ರವರೆಗೆ ಸೌಲಭ್ಯ ಆರಂಭವಾಗಲಿದೆ. ಪ್ರತಿ ಶನಿವಾರ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ(17305)ರೈಲು ಬೆಳಿಗ್ಗೆ 10.30ಕ್ಕೆ ಹೊರಡಲಿದೆ. ಕೊಟ್ಟಾಯಂನಿಂದ ಹುಬ್ಬಳ್ಳಿಗೆ(07306) ರೈಲು ಪ್ರತಿ ಭಾನುವಾರ ಬೆಳ್ಳಿಗೆ 11 ಗಂಟೆಗೆ ಹೊರಡಲಿದೆ.
ಡಿ. 5ರಿಂದ 17 ಪ್ರತಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ(17307) ಹೊರಡಲಿದೆ. ಡಿ.೬ರಿಂದ ಕೊಟ್ಟಾಯಂ ನಿಂದ ಹುಬ್ಬಳ್ಳಿಗೆ (07308) ಪ್ರತಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಹೊಡಲಿದೆ. ಈಗಾಗಲೇ ಮುಂಗಡ ಟಿಕೇಟ್ ಆರಂಭವಾಗಿದ್ದು, ಇದರ ಸದುಪಯೋಗ ಪ್ರಯಾಣಿಕರು ಪಡೆಯಬಹುದು ಎಂದು ತಿಳಿಸಿದರು.
ಕಳೆದ ಬಾರಿ ವಿಜಯಪುರ ಹಾಗೂ ಬೆಳಗಾವಿಯಿಂದ ರೈಲು ಪ್ರಾರಂಭಿಸಲಾಗಿತ್ತು. ಆದರೆ ಸರಿಯಾದ ಜನಸ್ಪಂದನೆ ಹಾಗೂ ಹೆಚ್ಚಿನ ಸಂಖ್ಯೆ ಭಕ್ತರು ಪ್ರಯಾಣಿಸದ ಕಾರಣ ರೈಲು ಸ್ಥಗಿತ ಮಾಡಿ ಹುಬ್ಬಳ್ಳಿಯಿಂದ ಆರಂಭಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆನಂದ ಗುರುಸ್ವಾಮಿ, ಮೋಹನ ಗುರುಸ್ವಾಮಿ, ಬಸವರಾಜ ನೇವನೂರ ಇದ್ದರು.