ಹೊಸದಿಗಂತ ವರದಿ ಕುಶಾಲನಗರ:
ಉತ್ತರ ಕೊಡಗಿನ ಗಡಿ ಪ್ರದೇಶ ಶಿರಂಗಾಲದ ಹೆದ್ದಾರಿಯಲ್ಲಿ ಲಾರಿ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೈಸೂರು ಜಿಲ್ಲೆಯ ಗಡಿ ಗ್ರಾಮ ಚಾಮರಾಯನಕೋಟೆ ನಿವಾಸಿ, ಕೂಲಿ ಕಾರ್ಮಿಕ ಅಶೋಕ್ ( 36) ಮೃತ ದುರ್ದೈವಿ.
ಅಶೋಕ್ ಎಂದಿನಂತೆ ಬುಧವಾರ ಬೆಳಗ್ಗೆ ತಮ್ಮ ನಿವಾಸದಿಂದ ಕೃಷಿ ಕೆಲಸಕ್ಕೆಂದು ಸ್ಕೂಟಿಯಲ್ಲಿ ಶಿರಂಗಾಲದ ಕಡೆಯಿಂದ ಕಡುವಿನಹೊಸಳ್ಳಿಯತ್ತ ತೆರಳುತ್ತಿದ್ದಾಗ, ಕೊಡಗಿನ ಗಡಿ ಶಿರಂಗಾಲದ ಮಂಟಿಗಮ್ಮನ ದೇವಾಲಯ ಸ್ವಾಗತ ಕಮಾನು ಬಳಿಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬಂದ ಲಾರಿ ಸ್ಕೂಟಿಗೆ ಡಿಕ್ಕಿಯಾಗಿದೆ.
ಈ ಸಂದರ್ಭ ಅಶೋಕ್’ನ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ತಗುಲಿ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತೆರಳಿದ ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಶವವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.