ಹೊಸದಿಗಂತ ಡಿಜಿಟಲ್ ಡೆಸ್ಕ್:
ವರದಕ್ಷಿಣೆ ಪ್ರಕರಣದಲ್ಲಿ ಪತ್ನಿಗೆ ಕಿರುಕುಳ ನೀಡಿ ಆಕೆಗೆ ಬೆಂಕಿ ಹಚ್ಚಿ ಕೊಂದ ಪಾಪಿ ಪತಿ ವಿಪಿನ್ ಭಾಟಿ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿರುವ ಗಂಡನ ಮನೆಯಲ್ಲಿ 28 ವರ್ಷದ ನಿಕ್ಕಿ ಭಾಟಿ(ನಿಕ್ಕಿ ಪಾಯ್ಲಾ) ಳನ್ನು ಆಕೆಯ ಅತ್ತೆ ಹಾಗೂ ಗಂಡನೇ ಆಕೆಯ ಕೂದಲನ್ನು ಹಿಡಿದೆಳೆದು ಅಮಾನವೀಯವಾಗಿ ಥಳಿಸಿ ಬೆಂಕಿ ಹಚ್ಚಿದ್ದರು.
ನಿಕ್ಕಿ ಭಾಟಿ ಹಾಗೂ ವಿಪಿನ್ ಭಾಟಿಯ ಪುಟ್ಟ ಮಗನ ಕಣ್ಣೆದುರೇ ಈ ಘಟನೆ ನಡೆದಿತ್ತು. ಅಪ್ಪನೇ ಅಮ್ಮನ ಮೇಲೆ ಏನೋ ಸುರಿದು ಬೆಂಕಿ ಹಚ್ಚಿದರು ಎಂದು ಈ ಪುಟ್ಟ ಬಾಲಕ ತನ್ನ ಬಂಧುಗಳ ಮುಂದೆ ಕಣ್ಣೀರಿಟ್ಟಿದ್ದು, ಮನಕಲುಕುವಂತಿತ್ತು. ಇದಾದ ನಂತರ ಪೊಲೀಸರು ನಿಕ್ಕಿ ಭಾಟಿಯ ಪತಿ ವಿಪಿನ್ ಭಾಟಿಯನ್ನು ಬಂಧಿಸಿದ್ದರು. ಆದರೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವಿಪಿನ್ ಆಸ್ಪತ್ರೆಯ ಬೆಡ್ ಮೇಲೆ, ತನ್ನ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದಿದ್ದಾನೆ. ತಾನು ಪತ್ನಿಯನ್ನು ಕೊಂದಿಲ್ಲ ಮತ್ತು ಅವಳು ತಾನಾಗಿಯೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ಗಂಡ ಹೆಂಡತಿಯರ ನಡುವೆ ಆಗಾಗ ಜಗಳಗಳು ನಡೆಯುತ್ತವೆ. ಇದು ತುಂಬಾ ಸಾಮಾನ್ಯ ಎಂದು ಹೇಳಿಕೊಂಡಿದ್ದಾನೆ.
ಘಟನೆಯ ಬಳಿಕ ನಿಕ್ಕಿಯ ಅತ್ತೆ ದಯಾ, ಭಾವ ರೋಹಿತ್, ಮಾವ ಸತ್ಯವೀರ್ ಮನೆಯಿಂದ ಪರಾರಿಯಾಗಿದ್ದಾರೆ.