ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗ್ರೂರ್ ಜೈಲಿನಿಂದ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಕಳ್ಳಸಾಗಣೆ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದು, ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ(ಭದ್ರತಾ) ಸೇರಿದಂತೆ 18 ಜನರನ್ನು ಬಂಧಿಸಿದ್ದಾರೆ.
ಸಂಗ್ರೂರ್ ಜೈಲಿನಲ್ಲಿ ನಿಯೋಜಿಸಲಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ-ಭದ್ರತಾ) ಗುರುಪ್ರೀತ್ ಸಿಂಗ್ ಅವರನ್ನು ಜೈಲಿನೊಳಗಿಂದಲೇ ಕಾರ್ಯನಿರ್ವಹಿಸುತ್ತಿದ್ದ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಗೌರವ್ ಯಾದವ್ ಅವರು ದೃಢಪಡಿಸಿದ್ದಾರೆ.
ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ, ಸಂಗ್ರೂರ್ ಜೈಲಿನೊಳಗೆ ನಡೆಸಿದ ದಾಳಿಯಲ್ಲಿ 12 ಮೊಬೈಲ್ ಫೋನ್ಗಳು, ನಾಲ್ಕು ಸ್ಮಾರ್ಟ್ವಾಚ್ಗಳು, 50 ಗ್ರಾಂ ಅಫೀಮು, 12 ಗ್ರಾಂ ಹೆರಾಯಿನ್ ಮತ್ತು ಇತರ ನಿಷಿದ್ಧ ವಸ್ತುಗಳು ಪತ್ತೆಯಾಗಿವೆ.
ಸಂಗ್ರೂರ್ ಜೈಲಿನಲ್ಲಿರುವ ಕೈದಿ ಗುರ್ವಿಂದರ್ ಸಿಂಗ್ ಅವರ ಸಹಚರ ಅಮೃತಸರ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ಮನ್ಪ್ರೀತ್ ಸಿಂಗ್ ಅವರನ್ನು ಸಹ ಬಂಧಿಸಲಾಗಿದೆ. ಮನ್ಪ್ರೀತ್ ಬಳಿಯಿದ್ದ 4 ಕೆಜಿ ಹೆರಾಯಿನ್, 5.5 ಲಕ್ಷ ರೂ. ಹಣ ಮತ್ತು ಎರಡು ಜೀವಂತ ಕಾರ್ಟ್ರಿಡ್ಜ್ಗಳೊಂದಿಗೆ 9 ಎಂಎಂ ಗ್ಲಾಕ್ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಡಿಜಿಪಿ ಗೌರವ್ ಯಾದವ್ ಅವರು ತಿಳಿಸಿದ್ದಾರೆ.