ಸೌಹಾರ್ದತೆಗೆ ಭಂಗ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಅನುಪಮ್ ಅಗ್ರವಾಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗ್ರವಾಲ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತವಾಗಿಸುವಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಈಗಾಗಲೇ ಈ ಹಿಂದಿನ ಪೊಲೀಸ್ ಆಯುಕ್ತರು ಕೈಗೆತ್ತಿಕೊಂಡಿರುವ ನಶೆ ಮುಕ್ತ ಮಂಗಳೂರು ಅಭಿಯಾನವನ್ನು ಮುಂದುವರಿಸುವುದಾಗಿ ತಿಳಿಸಿದರು.

ಮಂಗಳೂರು ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಸೌಹಾರ್ದತೆಗೆ ಭಂಗ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರವು ಮಹತ್ತರವಾದುದು ಎಂದರು.

ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ನಶೆ ಮುಕ್ತ ಮಂಗಳೂರು ಕನಸು ನನಸು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಈ ಅಭಿಯಾನವನ್ನು ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಕರ್ನಾಟಕ ಪೊಲೀಸರಿಗೆ ಮತ್ತೊಂದು ಪ್ರಮುಖ ಸೂಕ್ಷ್ಮ ವಿಚಾರ ಅನೈತಿಕ ಪೊಲೀಸ್‌ಗಿರಿ. ಈ ಭಾಗದಲ್ಲಿ ಸಮಸ್ಯೆ ಹೆಚ್ಚಿರುವ ಬಗ್ಗೆ ಅರಿವಿದೆ. ಪೊಲೀಸರು ಈಗಾಗಲೇ ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳ ಮೂಲಕ ಕಾನೂನಿನ ನೈಜ ಮುಖವನ್ನು ತೋರಿಸಲಿದ್ದೇವೆ ಎಂದು ಅವರು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!