ಹಾಡಹಗಲೇ BMTC ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಎಂಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಗೆ ಹಾಡಹಗಲೇ ಕಂಡಕ್ಟರ್ ಹಾಗೂ ಇನ್ನಿಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

9 ನೇ ತರಗತಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚ್ಮಂಡ್ ಸರ್ಕಲ್‍ಗೆ ಪ್ರಯಾಣ ಮಾಡುತ್ತಿದಳು. ಗುಂಜೂರು ಡಿಪೋ, 41, KA 57- F2695 ನ ಕಂಡೆಕ್ಟರ್ ಅಮಾನವೀಯ ವರ್ತನೆ ತೋರಿದ್ದಾರೆ. ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಗೆ ಅಂತ ಆಧಾರ್ ಕಾರ್ಡ್ (Adhar Card) ತೋರಿಸಿದ್ದಾಳೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹ ಇದ್ದಿದ್ದಕ್ಕೆ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡುವಂತೆ ಕಂಡೆಕ್ಟರ್ ಹೇಳಿದ್ದಾರೆ.

ವಿದ್ಯಾರ್ಥಿನಿ ದುಡ್ಡು ಕೊಟ್ಟು ಟಿಕೆಟ್ ಪಡೆದ್ರೂ, ವಿದ್ಯಾರ್ಥಿನಿಯ ಆಧಾರ್ ತೊಗೊಂಡು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ಮುಂದೆ ನಿಂದಿಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಕಂಡೆಕ್ಟರ್‍ಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಏನ್ ನಿಮ್ ಅಪ್ಪಂಗೆ ಹೇಳ್ತೀಯಾ..?. ನಿಮ್ಮಪ್ಪ ಏನ್ ಸಿಎಂ ಆ..? ಪಿಎಂ ಆ..? ನಿನ್ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಾಕ್ತೀನಿ ಅಂತ, ಕತ್ತು ಹಿಡಿದು ಬಸ್ ನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ ಎಂದು ವಿದ್ಯಾರ್ಥಿನಿ ಹಾಗೂ ತಾಯಿ ಆರೋಪಿಸಿದ್ದಾರೆ.‌

ರಿಚ್ಮಂಡ್ ಸರ್ಕಲ್ ಬಳಿ ವಿದ್ಯಾರ್ಥಿಯನ್ನು ಇಳಿಸದೇ ಕಾರ್ಪೊರೇಷನ್ ಸರ್ಕಲ್ ಬಳಿ ಇಳಿಸಿ ಹೋಗಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿನಿ ತಾಯಿಗೆ ಕರೆ ಮಾಡಿ ತಿಳಿಸಿದ್ದಾಳೆ. ಕಾರ್ಪೊರೇಷನ್ ಸರ್ಕಲ್ ಬಳಿ ಬಂದು ತಾಯಿ, ಮಗಳನ್ನು ಕರೆದೊಯ್ದಿದ್ದಾರೆ.ಹಾಡಹಗಲೇ ಬಿಎಂಟಿಸಿ ಬಸ್ ನಲ್ಲಿ ನಡೆದ ಈ ಘಟನೆ ಇತರ ಪ್ರಯಾಣಿಕರನ್ನೂ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ಮೇಲಿನ ದೌರ್ಜನ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!