ಹೆಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ಡಾ.ಎಂ.ಸಿ.ಸುಧಾಕರ್

ಹೊಸದಿಗಂತ ವರದಿ, ಮೈಸೂರು:

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಟಾಂಗ್ ನೀಡಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆದರೇ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ಹೆಚ್.ಡಿ.ಕುಮಾರಸ್ವಾಮಿ, ಇದೀಗ ಅವರೇ ಪದೇ ಪದೇ ಹೋಗಿ ಮೋದಿಯವರನ್ನ ಭೇಟಿ ಮಾಡುತ್ತಿದ್ದಾರೆ ಎಂದು ಛೇಡಿಸಿದರು.
ಸರ್ಕಾರದ ವಿರುದ್ಧ ವೈಎಸ್ಟಿ, ಎಸ್‌ಎಸ್ಟಿ ಟ್ಯಾಕ್ಸ್ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ವೈಯಕ್ತಿಕವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಬಹಳ ಗೌರವ ಇದೆ. ನಾವು ಹೆಚ್‌ಡಿಕೆ ಟ್ಯಾಕ್ಸ್ ಅಂತ ಹೆಸರು ಕೊಡಬಹುದು. ಅವರ ರಾಜಕೀಯ ನಡೆ ಬಗ್ಗೆ ಜನರಿಗೆ ಗೊತ್ತಿದೆ. ಹಳೇ ಮೈಸೂರು ಭಾಗದಲ್ಲಿ ಅವರ ಅವಕಾಶದವಾದಿ ರಾಜಕಾರಣ ಎಲ್ಲರಿಗೂ ಗೊತ್ತಿದೆ. ರಾಜ್ಯಾಧ್ಯಕ್ಷರನ್ನ ಬಿಟ್ಟು ಕುಟುಂಬ ರಾಜಕಾರಣ ಮಾಡ್ತಾರೆ. ಇಂತವರು ಕಾಂಗ್ರೆಸ್ ಬಗ್ಗೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಹತಾಶರಾಗಿದ್ದಾರೆ. ಅವರಿಗೆ ಗಾಯದ ಮೇಲೆ ಉಪ್ಪು ಸುರಿದ ಹಾಗೆ ಆಗಿದೆ. ರಾಜ್ಯದಲ್ಲಿ ಮೋದಿ ಪರವಾದ ಅಲೆ ಇಲ್ಲ. ಮೋದಿಯವರ ಮುಖ ನೋಡಿ ಯಾರೂ ಓಟ್ ಹಾಕ್ತಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನ ಗ್ಯಾರಂಟಿಗಳು ಜನಮನ್ನಣೆ ಗಳಿಸಿವೆ. ಈಗಾಗಲೇ ನಾಲ್ಕು ಗ್ಯಾರಂಟಿಗಳು ಜನರನ್ನ ತಲುಪುತ್ತಿವೆ. ಇದು ಬಿಜಪಿಯವರ ನಿದ್ದೆ ಕೆಡಿಸಿದೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಬಿಜೆಪಿ ಕಳೆದ ಹಲವು ವರ್ಷಗಳಿಂದ ಪ್ರಬಲವಾಗಿರುವವರ ಮೇಲೆ ದಾಳಿ ಮಾಡುತ್ತಿದೆ. ಐಟಿ, ಇಡಿ ಮೂಲಕ ಪ್ರತಿ ಪಕ್ಷಗಳ ಹತ್ತಿಕ್ಕುವ ಕೆಲಸ ಆಗುತ್ತಿದೆ. ಜಾರಿ ನಿರ್ದೇಶನಾಲಯದ ಸಂಸ್ಥೆಗಳನ್ನ ತಮ್ಮ ಅಣತೆಯಂತೆ ಬಳಸಿಕೊಳ್ತಿದ್ದಾರೆ. ಸುಖಾ ಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!