ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟ ಡಾಲಿ ಧನಂಜಯ ಅದ್ಧೂರಿಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಗುರು ಹಿರಿಯರ, ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದುರ್ಗ ಮೂಲದ ಡಾ. ಧನ್ಯತಾ ಕೊರಳಿಗೆ ತಾಳಿ ಕಟ್ಟಿ ತಮ್ಮ ಜೀವನಕ್ಕೆ ಬರಮಾಡಿಕೊಂಡಿದ್ದಾರೆ.
ಇನ್ನೂ, ಮದುವೆಯಾದ ಬಳಿಕ ನಟ ಡಾಲಿ ವೇದಿಕೆ ಮೇಲೆ ಬಂದ ಅಭಿಮಾನಿಗಳನ್ನು ನೋಡಿ ಭಾವುಕರಾಗಿದ್ದರು.
ಅಲ್ಲದೇ ವೇದಿಕೆಯ ಮುಂದೆ ಸೇರಿಕೊಂಡಿದ್ದ ಅಭಿಮಾನಿಗಳ ನೋಡಿ ಮಾತಾಡಿದ ಡಾಲಿ, ನಮ್ಮನ್ನು ಹರಸಲು ಬಂದ ಎಲ್ಲರಿಗೂ ಧನ್ಯವಾದಗಳು. ಬೇರೆ ಬೇರೆ ಕಾರಣಗಳಿಂದ ವೇದಿಕೆ ಮೇಲೆ ತೊಂದರೆ ಆಗಿದೆ. ಎಲ್ಲರನ್ನೂ ಅಟೆಂಡ್ ಮಾಡಲು ಆಗಲಿಲ್ಲ. ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದ್ದೇವೆ. ಅಭಿಮಾನಿಗಳು ತುಂಬಾ ಜನ ವೇದಿಕೆ ಮೇಲೆ ಬಂದರು. ಇಂತಹ ಈವೆಂಟ್ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕಷ್ಟ. ಯಾರ ಮನಸ್ಸಿಗಾದರೂ ನೋವಾಗಿದ್ರೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ಈ ಮಾತನ್ನು ಮುಗಿಸಿದ ಬಳಿಕ ನವ ಜೋಡಿ ವೇದಿಕೆಯ ಮುಂದೆ ನಿಂತುಕೊಂಡಿದ್ದ ಅಭಿಮಾನಿಗಳಿಗೆ ಮೊಣಕಾಲೂರಿ ನಮಸ್ಕಾರ ಮಾಡಿದ್ದಾರೆ. ಇದನ್ನೂ ನೋಡುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಕೂಗಾಡಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾಲಿ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರು ಬಾಲ್ಯದ ಗೆಳೆಯರು, ನನ್ನ ಗುರುಗಳು ಬಂದಿದ್ದರು. ಮೈಸೂರಿನಲ್ಲಿ (Mysuru) ನನ್ನ ಮದುವೆ ಸಾರ್ಥಕ ಅನ್ನಿಸ್ತು ಎಂದರು.
ಮೈಸೂರು ಅಂದರೆ ಎಲ್ಲರಿಗೂ ಎಮೋಷನ್ ಇದ್ದೇ ಇದೆ. ಮದುವೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಚಿತ್ರರಂಗಕ್ಕೆ ಯಾವಾಗಲೂ ನಾನು ಆಭಾರಿ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಎಲ್ಲರ ಸಪೋರ್ಟ್ ಇದೆ. ಈಗ ಜವಾಬ್ದಾರಿ ಜಾಸ್ತಿ ಆಗಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಎಲ್ಲರಿಗೂ ಧನ್ಯವಾದ. ಕಾರ್ಯಕ್ರಮ ಶಾಂತಿಯುತವಾಗಿ ಆಯಿತು. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಆಗಿದೆ. ಎಲ್ಲರು ಖುಷಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಗೊತ್ತಿಲ್ಲ. ಅಭಿಮಾನಿಗಳು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ನಾನು ಜೀವನ ಕಂಡುಕೊಂಡಿದ್ದು ಮೈಸೂರಲ್ಲಿ, ಇಲ್ಲೇ ಮದುವೆ ಆಗಿದ್ದು ಖುಷಿ ಆಯ್ತು. ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ ಎಂದು ಹೇಳಿದರು.
ಇನ್ನು ಡಾಲಿ ಪತ್ನಿ ಧನ್ಯತಾ ಪ್ರತಿಕ್ರಿಯಿಸಿ, ಇಷ್ಟು ಜನರನ್ನ ನಾನು ನೋಡಿಲ್ಲ. ತುಂಬಾ ಭಾವುಕಳಾದೆ. ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಪ್ರೀತಿ ಆಶೀರ್ವಾದ ನೋಡಿ ತುಂಬಾ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು.