ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಂಡೇಲಿಯ ಮನೆಯೊಂದರಿಂದ ‘ಸಿನಿಮಾ ಚಿತ್ರೀಕರಣಕ್ಕೆ ಮಾತ್ರ’ ಎಂದು ಬರೆದಿದ್ದ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.
ಖಚಿತ ಮಾಹಿತಿ ಆಧಾರದ ಮೇಲೆ, ಮಂಗಳವಾರ ದಾಂಡೇಲಿಯ ಗಾಂಧಿನಗರದಲ್ಲಿ ಬಾಡಿಗೆ ಮನೆಯೊಂದನ್ನು ಶೋಧಿಸಿದ ಪೊಲೀಸರು, ನಕಲಿ ನೋಟುಗಳ ಜೊತೆಗೆ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ನೂರ್ಜನ್ ಜುಂಜುವಾಡ್ಕರ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆದಾರನಾಗಿ ಗೋವಾ ಮೂಲದವನೆಂದು ಹೇಳಲಾಗುವ ಅರ್ಷದ್ ಖಾನ್ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಖಾನ್ ಕಳೆದ ಒಂದು ತಿಂಗಳಿನಿಂದ ಮನೆಯಲ್ಲಿ ಕಾಣಿಸದಿದ್ದಾಗ ಜುಂಜುವಾಡ್ಕರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಕಲಿ ನೋಟುಗಳ ಮೇಲೆ ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿತ್ತು. ಆದರೆ, ಅದರಲ್ಲಿ ಆರ್ಬಿಐ ಗವರ್ನರ್ ಸಹಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.