ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದರು.
ಅದನ್ನು ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ (ECI) ತಳ್ಳಿಹಾಕಿತ್ತು. ಇದೀಗ ಸಾಕ್ಷಿ ಸಮೇತ ತಮ್ಮ ಆರೋಪವನ್ನು ಪುನರುಚ್ಛರಿಸಿರುವ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ರೀತಿಯಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ನಕಲಿ ಮತದಾನ ನಡೆದಿದೆ ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಚುನಾವಣಾ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ‘ಆಟಂ ಬಾಂಬ್’ ಸಿಡಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಅದರಂತೆ ರಾಹುಲ್ ಗಾಂಧಿ ಇಂದು ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ.
ಕರ್ನಾಟಕದ ಮತದಾರರ ಪಟ್ಟಿಗಳಲ್ಲಿ ವಂಚನೆ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು, ಕರ್ನಾಟಕದಲ್ಲಿ 40,009 ನಕಲಿ ಮತದಾರರ ವಿಳಾಸಗಳಿವೆ ಎಂದಿದ್ದಾರೆ. ಕಾಂಗ್ರೆಸ್ ನಡೆಸಿದ’ವೋಟ್ ಚೋರಿ’ ತನಿಖೆಯಲ್ಲಿ ‘ಮನೆ ಸಂಖ್ಯೆ 0’ಎಂದು ಉಲ್ಲೇಖಿಸಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗವು ಮತಗಳನ್ನು ಕದಿಯಲು ಬಿಜೆಪಿಯೊಂದಿಗೆ ಕೈಜೋಡಿಸಿದೆ. ಮತದಾರರ ಪಟ್ಟಿಗಳಿಗೆ ನಕಲಿ ಜನರನ್ನು ಸೇರಿಸಲಾಗುತ್ತಿದೆ ಎಂದಿದ್ದಾರೆ. ಕರ್ನಾಟಕ ಮತದಾರರ ಪಟ್ಟಿಯನ್ನು ತೋರಿಸುವ ಮೂಲಕ ಅವರು ತಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ.
ಮಹದೇವಪುರದಲ್ಲಿ ನಕಲಿ ವಿಳಾಸಗಳನ್ನು ಹೊಂದಿರುವ ‘40,009’ ಮತದಾರರಿದ್ದಾರೆ. ‘ಮನೆ ಸಂಖ್ಯೆ 0’ ಎಂಬ ಅಡ್ರೆಸ್ ಇರುವ ಹಲವರು ನೋಂದಾಯಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, 46 ಮತದಾರರು ಒಂದೇ ರೂಮಿನ ವಿಳಾಸದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಆ ಸ್ಥಳಕ್ಕೆ ಭೇಟಿ ನೀಡಿದಾಗ, ಯಾರೂ ಅಲ್ಲಿ ವಾಸಿಸುತ್ತಿಲ್ಲ ಎಂದು ಗೊತ್ತಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಕಲಿ ವಿಳಾಸಗಳೊಂದಿಗೆ 40,000 ನಮೂದುಗಳು ಮತ್ತು ಯಾವುದೇ ಫೋಟೋಗಳಿಲ್ಲದ ಸುಮಾರು 4,000 ನೋಂದಾಯಿತ ಮತದಾರರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
LIVE: Press Conference – #VoteChori | Indira Bhawan, New Delhi https://t.co/BlZwacZpto
— Rahul Gandhi (@RahulGandhi) August 7, 2025