ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಿಷ್ಟ ಪದ್ಧತಿಯಾಗಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ, ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ ಮಂಡಿಸಲಾಗಿದೆ.
ಈ ಮಸೂದೆ ಅನ್ವಯ ಇನ್ಮುಂದೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, 1 ಲಕ್ಷ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಹಿಷ್ಕಾರ ಹಾಕುವ ಬಗ್ಗೆ ಸಭೆ–ಪಂಚಾಯಿತಿ ನಡೆಸುವುದು, ಬಹಿಷ್ಕಾರಕ್ಕೆ ಸಹಾಯ, ಪ್ರಚೋದನೆ ಕೊಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಬಹಿಷ್ಕಾರಕ್ಕೆ ಒತ್ತಡ ಹೇರುವ ಮೂಲಕ ನಿರ್ಧಾರಕ್ಕೆ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಈ ಕುರಿತು ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ ಎಂದು ಮಸೂದೆಯಲ್ಲಿ ಉಲ್ಲೇಖಿಸಿದೆ. ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು.
ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಬಹುದು. ಪೀಡಿತರಿಗೆ ಸಹಾಯ ಒದಗಿಸಲು ಸೂಚಿಸಬಹುದು. ದಂಡದ ಮೊತ್ತವನ್ನು ಪೀಡಿತರಿಗೆ ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಡಿಸಿಗಳಿಗೂ ಕೆಲ ಅಧಿಕಾರ ಕೊಡಲಾಗಿದೆ. ಇನ್ನು ಸಾಮಾಜಿಕ ಬಹಿಷ್ಕಾರ ತಡೆಗೆ ಅಧಿಕಾರಿಗಳನ್ನು ನಿಯೋಜಿಸಲು ಮಸೂದೆಯಲ್ಲಿ ಅವಕಾಶ ಕೊಡಲಾಗಿದೆ.
ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು: ಮಸೂದೆ ಮಂಡನೆ

