1 ಲಕ್ಷ ರೂ. ಕೊಡುತ್ತೇವೆ ಎಂದಿದ್ರಲ್ಲ, ಕೊಡಿ: ಕಾಂಗ್ರೆಸ್‌ ಕಚೇರಿ ಮುಂದೆ ಮುಸ್ಲಿಂ ಮಹಿಳೆಯರ ಕ್ಯೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆ ಫಲಿತಾಂಶವೂ ಪ್ರಕಟವಾಗಿದೆ. ಸರ್ಕಾರ ರಚನೆಗೆ ಎನ್‌ಡಿಎ ಮೈತ್ರಿಕೂಟ, ಇಂಡಿಯಾ ಒಕ್ಕೂಟದ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇದರ ನಡುವೆ ಇತ್ತ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ.

‘ಚುನಾವಣೆ ಬಳಿಕ 1 ಲಕ್ಷ ರೂ. ಕೊಡುತ್ತೇವೆ ಎಂದಿದ್ರಲ್ಲ, ಕೊಡಿ’ ಎಂದು ಮುಸ್ಲಿಂ ಮಹಿಳೆಯರು ಲಖನೌನಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ. ಈ ಕುರಿತು ವಿಡಿಯೋ ಕೂಡ ವೈರಲ್‌ ಆಗಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಮಹಿಳೆಯರಿಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿಗಳನ್ನು ನೀಡಿತ್ತು. ಈ ಕುರಿತು ಗ್ಯಾರಂಟಿ ಕಾರ್ಡ್‌ ಕೂಡ ಬಿಡುಗಡೆ ಮಾಡಿತ್ತು. ಈ ಕಾರ್ಡ್‌ಅನ್ನು ಹಿಡಿದುಕೊಂಡ ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ಕಚೇರಿ ಎದುರು ಸಾಲಾಗಿ ನಿಂತಿದ್ದಾರೆ.

“ನಮಗೆ 1 ಲಕ್ಷ ರೂ. ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಅದರಂತೆ, ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದುಕೊಂಡು ನಾವು ಇಲ್ಲಿಗೆ ಬಂದಿದ್ದೇವೆ. ಅವರು ಕೊಡುತ್ತೇನೆ ಎಂದಿದ್ದರು, ಫಾರ್ಮ್‌ ಕೂಡ ಕೊಟ್ಟಿದ್ದರು. ಅವುಗಳನ್ನು ತೆಗೆದುಕೊಂಡು ಬಂದಿದ್ದೇವೆ. ಇದುವರೆಗೆ ಸಿಕ್ಕಿಲ್ಲ” ಎಂದು ಮುಸ್ಲಿಂ ಮಹಿಳೆಯರು ಹೇಳಿದ್ದಾರೆ. ಅಲ್ಲದೆ, “12 ಗಂಟೆಗೆ ಬನ್ನಿ ಎಂದಿದ್ದರು, ಅದಕ್ಕಾಗಿ ಬಂದಿದ್ದೇವೆ. ಇದುವರೆಗೆ ದುಡ್ಡು ಸಿಕ್ಕಿಲ್ಲ” ಎಂದು ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?
ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಕುರಿತು ಹಲವು ಬಾರಿ ಘೋಷಣೆ ಮಾಡಿದ್ದರು. ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗಳಿಗೆ ಮಾಸಿಕ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ದೇಶದ ಬಡ ಮಹಿಳೆಯರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತದೆ. ಇದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ. ಟಕಾ ಟಕ್‌ ಅಂತ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ ಎಂಬುದಾಗಿ ಹೇಳಿದ್ದರು. ಹಾಗಾಗಿ, ಚುನಾವಣೆ ಮುಗಿದ ಕೂಡಲೇ ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!