ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಕಳೆದ 15 ದಿನಗಳಲ್ಲಿ 10 ಸೇತುವೆಗಳು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಚೈತನ್ಯ ಪ್ರಸಾದ್, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ 16 ಎಂಜಿನಿಯರುಗಳನ್ನ ಅಮಾನತುಗೊಳಿಸಲಾಗಿದೆ. ಸೇತುವೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಗುರುವಾರ (ಜು.4) ಸರನ್ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಇದು 24 ಗಂಟೆಯಲ್ಲಿ ಜಿಲ್ಲೆಯೊಂದರಲ್ಲಿ ಕುಸಿದು ಬಿದ್ದ 3ನೇ ಸೇತುವೆ ಆಗಿದೆ. ಅಲ್ಲದೇ ಬಿಹಾರ ರಾಜ್ಯದಲ್ಲಿ ಕುಸಿದ 10ನೇ ಸೇತುವೆಯೂ ಆಗಿದೆ. ಈವರೆಗೆ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ.