ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ನೀರಿನ ತೃತೀಯ ಹಂತದ ಶುದ್ಧೀಕರಣಕ್ಕೆ ಸರ್ಕಾರ ಮುಂದಾಗಬೇಕು ಹಾಗೂ ಎತ್ತಿನಹೊಳೆ ಯೋಜನೆಗೆ ಈ ವರ್ಷ 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿ ಆದ್ಯತೆಯ ಮೇಲೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ. ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ನಾಳೆ ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಹಲವು ನಿರೀಕ್ಷೆಗಳನ್ನು ಹೊಂದಲಾಗಿತ್ತು ಆದರೆ, ಸಂಪುಟ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ಮೂಲಕ ಸರ್ಕಾರ ಜನರ ನಿರೀಕ್ಷೆ ಹುಸಿಗೊಳಿಸಿದೆ ಎಂದು ಆರೋಪಿಸಿದ್ದಾರೆ.