ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗೆ ಹತ್ತು ನಿಮಿಷ ತಡವಾಗಿ ಬಂದ ವಿದ್ಯಾರ್ಥಿನಿಗೆ ನೂರು ಬಸ್ಕಿ ಹೊಡೆಸಿದ್ದು, ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ನೂರು ಬಸ್ಕಿ ಹೊಡೆದ ನಂತರ ಆಕೆ ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾನ್ನಪ್ಪಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಶಾಲಾ ಆಡಳಿತದಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ತಿಳಿಸಿದ್ದಾರೆ.
ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಾಲಾ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳ ಹೇಳಿಕೆಗಳು ಸೇರಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಶಿಕ್ಷಕನನ್ನು ಬಂಧಿಸಲಾಗಿದೆ. ಶಾಲೆಯ ನಿರ್ಲಕ್ಷ್ಯವಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಾಲಕಿ ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಇತರ ವಿದ್ಯಾರ್ಥಿಗಳೊಂದಿಗೆ ಈಕೆಗೂ ಬಸ್ಕಿ ಹೊಡೆಯುವಂತೆ ಒತ್ತಾಯಿಸಲಾಗಿದೆ. ಬಸ್ಕಿ ಹೊಡೆಯುವ ವೇಳೆ ಭಾರದ ಬ್ಯಾಗ್ ಕೂಡ ಹಾಕಿಕೊಳ್ಳಲು ಸೂಚನೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ತಲುಪಿದ ನಂತರ ಆಕೆಗೆ ಅಸ್ವಸ್ಥತೆ ಮತ್ತು ಕಾಲಿನಲ್ಲಿ ಊತ ಕಾಣಿಸಿಕೊಂಡಿತು. ಬೆನ್ನು ನೋವು ಮಲಗುತ್ತೇನೆ ಎಂದು ಹೇಳಿದವಳು ಏಳಲೇ ಇಲ್ಲ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

